Advertisement

25 ಸಾವಿರ ಲೀಡ್‌ನಿಂದ ಗೌಡ್ರ ಗೆಲ್ಲಿಸಿ

11:24 AM May 12, 2019 | Team Udayavani |

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ವಿವಿಧೆಡೆ ರೋಡ್‌ ಶೋ ಮಾಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ ಯಾಚಿಸಿದರು.

Advertisement

ಕುಂದಗೋಳ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ಅದರಗುಂಚಿ, ನೂಲ್ವಿ, ಶೆರೆವಾಡ, ಬೆಟದೂರು, ಕೂಬಿಹಾಳ, ಇಂಗಳಗಿ ಗ್ರಾಮಗಳಲ್ಲಿ ಮತಯಾಚಿಸಿದರು. ಅದರಗುಂಚಿ, ನೂಲ್ವಿ, ಶೆರೇವಾಡದಲ್ಲಿ ಮಾತನಾಡಿದ ಯಡಿಯೂರಪ್ಪ, ಪ್ರತಿ ಬಾರಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡುವ ನಿಮ್ಮೆಲ್ಲರಿಗೂ ಅಭಿನಂದನೆ. ಅನಿರೀಕ್ಷಿತವಾಗಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಂದಿದ್ದು, ಕಳೆದ ಬಾರಿ ಅತ್ಯಲ್ಪ ಮತಗಳಿಂದ ಸೋಲು ಕಂಡಿರುವ ಎಸ್‌.ಐ. ಚಿಕ್ಕನಗೌಡರ ಅವರು ಈ ಬಾರಿ ಸುಮಾರು 25 ಸಾವಿರ ಮತಗಳ ಅಂತರದಿಂದ ಜಯ ಗಳಿಸುವಂತೆ ನೀವೆಲ್ಲರೂ ಆಶೀರ್ವದಿಸಬೇಕು ಎಂದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಅದರ ನಿರ್ವಹಣೆಗೆ ಕೆಲಸ ಮಾಡದೇ ರೆಸಾರ್ಟ್‌ಗಳಲ್ಲಿ ಮುಖ್ಯಮಂತ್ರಿಗಳು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಬಿಜೆಪಿ ನೀಡಿದ ಹಲವಾರು ಜನಪರ ಯೋಜನೆಗಳನ್ನು ಈಗಿನ ಸರ್ಕಾರ ಕೈಬಿಟ್ಟಿದೆ. ಈ ಸರಕಾರಕ್ಕೆ ಜನರ ಶ್ರೇಯೋಭಿವೃದ್ಧಿ ಬೇಕಾಗಿಲ್ಲ ಎಂದು ಹರಿಹಾಯ್ದರು.

ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ, ಮುಖಂಡರಾದ ಪ್ರಹ್ಲಾದ ಜೋಶಿ, ಕೋಟಾ ಶ್ರೀನಿವಾಸ ಪೂಜಾರಿ, ಶಂಕರಪಾಟೀಲ ಮುನೇನಕೊಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಮೋಹನ ಲಿಂಬಿಕಾಯಿ, ಎಂ.ಆರ್‌. ಪಾಟೀಲ, ಸೀಮಾ ಮಸೂತಿ ಮೊದಲಾದವರು ಇದ್ದರು.

ಚಿಕ್ಕನಗೌಡ್ರಗೆ ಅಭೂತಪೂರ್ವ ಬೆಂಬಲ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಅವರ ಜಯ ಶತಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ಹಾಗೂ ಚಿಂಚೊಳಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಕುಂದಗೋಳ ಕ್ಷೇತ್ರದಲ್ಲಿ ಸಚಿವ ಡಿ.ಕೆ. ಶಿವಕುಮಾರ ಅವರು ಬೀಡುಬಿಟ್ಟಿದ್ದು, ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಮೇ 23ರ ಫಲಿತಾಂಶದ ನಂತರ ಜನರೇ ಕಾಂಗ್ರೆಸ್‌ನವರಿಗೆ ತಕ್ಕಪಾಠ ಕಲಿಸಲಿದ್ದಾರೆ. 23ರ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗಲಿದೆ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು. ರೋಡ್‌ ಶೋನಲ್ಲಿ ಪಿಕ್‌ಪಾಕೇಟ್
ಮಹಿಳೆಯರ ಗೀತೆ
ಅದರಗುಂಚಿ ಗ್ರಾಮದಲ್ಲಿ ಪ್ರಚಾರ ಸಮಯದಲ್ಲಿ ಮಾಜಿ ಸಚಿವರ ಆಪ್ತ ಸಹಾಯಕನ ಜೇಬಿಗೆ ಕತ್ತರಿ ಹಾಕಲಾಯಿತು. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಆಪ್ತ ಸಹಾಯಕ ಅಭಿಜಿತ್‌ ಜೇಬಿಗೆ ಕತ್ತರಿ ಹಾಕಿದ್ದು, ಖದೀಮರು ಸುಮಾರು 50 ಸಾವಿರ ರೂ. ಎಗರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಪರ ಶನಿವಾರ ನಡೆದ ರೋಡ್‌ ಶೋದಲ್ಲಿ ಮಹಿಳೆಯರು ಹಾಡು ಹೇಳುವ ಮೂಲಕ ಕಮಲದ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.
ರಂಭಾಪುರಿ ಶ್ರೀ ಆಶೀರ್ವಾದ ಪಡೆದ ಬಿಎಸ್‌ವೈ
ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಶನಿವಾರ ಬೆಳಗ್ಗೆ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕುಂದಗೋಳ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ನಗರದಲ್ಲಿ ವಾಸ್ತವ್ಯ ಮಾಡಿದ್ದು, ಶನಿವಾರ ಶ್ರೀಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ರಂಭಾಪುರಿ ಶ್ರೀಗಳು ಶಾಲು ಹೊದಿಸಿ, ಫಲ ನೀಡಿ ಆಶೀರ್ವದಿಸಿದರು. ಇದಕ್ಕೂ ಮೊದಲು ಯಡಿಯೂರಪ್ಪ ಅವರು ರೇಣುಕಾಚಾರ್ಯರ ದೇವಸ್ಥಾನಕ್ಕೆ ಭೇಟಿಕೊಟ್ಟರು. ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮೊದಲಾದವರಿದ್ದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next