Advertisement

ದಾಖಲೆ ಮತಗಳಿಂದ ಹೊರಟ್ಟಿ ಗೆಲುವು: ಜೋಶಿ

12:41 PM May 27, 2022 | Team Udayavani |

ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ಈ ಬಾರಿ ದಾಖಲೆ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಕಡಪಾ ಮೈದಾನದಲ್ಲಿ ಚುನಾವಣಾ ಪ್ರಚಾರಾರ್ಥ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಂಸದೀಯ ಪಟುವೊಬ್ಬರು ಸತತ 42 ವರ್ಷ ಗಳಿಂದ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿದ್ದು ವಿಶ್ವ ದಾಖಲೆಯಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ನಾವು-ಹೊರಟ್ಟಿ ಪರಸ್ಪರ ವಿರೋಧಿ ಹೋರಾಟದ ಜತೆಗೆ ತಂತ್ರಗಳ ಮೂಲಕ ಸೋಲಿಸಲು ಪ್ರಯತ್ನಿಸಿ ದ್ದೇವೆ. ಆದರೆ ಶಿಕ್ಷಕರ ಆಶೀರ್ವಾದದಿಂದ ಸತತ ಗೆಲುವು ಸಾಧಿಸಿಕೊಂಡೇ ಬಂದಿದ್ದಾರೆ. ಈಗಂತೂ ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿರುವ ಹೊರಟ್ಟಿ ಅವರೇ ನಮ್ಮ ಅಭ್ಯರ್ಥಿಯಾಗಿದ್ದು, ಮತ್ತೂಂದು ದಾಖಲೆ ಬರೆಯಲಿದ್ದಾರೆ ಎಂದರು.

ಬಸವರಾಜ ಹೊರಟ್ಟಿ ಮಾತನಾಡಿ, ರಾಜಕಾರಣಿಗಳ ಜೀವನ ಸುಖವಾಗಿರುತ್ತದೆ ಅಂದುಕೊಂಡಿದ್ದರೆ ತಪ್ಪು. ಅಧಿಕಾರವಿದ್ದರೂ ನೆಮ್ಮದಿ ಸಲೀಸಾಗಿ ಸಿಗದು. ಕುಟುಂಬ ವರ್ಗದವರಿಗೆ ಸಮಯ ಕೊಡಲು ಆಗಲ್ಲ. ಈ ಕಾರಣದಿಂದಲೇ ನಾನು ಚುನಾವಣೆಯಲ್ಲಿ ಸೋಲುವಂತೆ ಎರಡು ಸಲ ದೇವರಲ್ಲಿ ಪತ್ನಿ ಹರಕೆ ಕಟ್ಟಿದ್ದರು. ಆದರೆ ಈವರೆಗೂ ಹರಕೆ ಈಡೇರಿಲ್ಲ. ಶಿಕ್ಷಕರ ಆಶೀರ್ವಾದದಿಂದ ಸತತ ಆಯ್ಕೆಗೊಂಡು ಬಂದಿದ್ದೇನೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಸಚಿವರಾದ ಸಿ.ಸಿ. ಪಾಟೀಲ, ಶಿವರಾಮ ಹೆಬ್ಟಾರ ಮಾತನಾಡಿದರು. ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ, ಅರುಣಕುಮಾರ ಪೂಜಾರ, ಎಸ್‌.ವಿ. ಸಂಕನೂರ, ಪ್ರದೀಪ ಶೆಟ್ಟರ ಇನ್ನಿತರರಿದ್ದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಸ್ವಾಗತಿಸಿದರು.

Advertisement

ಕಾಲಮಾನ ಬದಲಾದಂತೆ ನಾನೂ ಬದಲಾವಣೆ ಬಯಸಿ ಬಿಜೆಪಿ ಪಕ್ಷಕ್ಕೆ ಬಂದಿದ್ದು, ಈ ಬಗ್ಗೆ ಕೊಂಚವೂ ಬಿಜೆಪಿಯಲ್ಲಿ ವಿರೋಧದ ಮಾತು ಕೇಳಿಬಂದಿಲ್ಲ. ಜೆಡಿಎಸ್‌ ಪಕ್ಷಕ್ಕೆ ನಾನು ದ್ರೋಹ ಮಾಡಿಲ್ಲ. ಅಲ್ಲಿನ ವರಿಷ್ಠರೊಂದಿಗೆ ಚರ್ಚೆ ಕೈಗೊಂಡೇ ಬಿಜೆಪಿಗೆ ಬಂದಿದ್ದು. ಬಿಜೆಪಿ ಶಿಸ್ತು, ನಿಯಮಗಳ ಅನ್ವಯ ನಡೆದುಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ಹಾಗೂ ನಾಯಕರಿಗೆ ಮುಜುಗರ ಆಗದಂತೆ ನೋಡಿಕೊಳ್ಳುತ್ತೇನೆ.  –ಬಸವರಾಜ ಹೊರಟ್ಟಿ, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next