ವಿಂಬಲ್ಡನ್: ವಿಂಬಲ್ಡನ್‌ನ ಶ್ರೇಯಾಂಕವನ್ನು ಪ್ರಕಟಿಸಲಾಗಿದ್ದು ಜೊಕೋವಿಕ್ ಮತ್ತು ನಡಾಲ್ ಪುರುಷರ ಡ್ರಾದಲ್ಲಿ ಅನುಕ್ರಮವಾಗಿ ಮೊದಲೆರಡು ಶ್ರೇಯಾಂಕ ಪಡೆದಿದ್ದಾರೆ.
ಡ್ಯಾನಿಲ್ ಮೆಡ್ವೆಡೇವ್ ಮತ್ತು ಅಲೆಕ್ಸಾರಂಡರ್ ಜ್ವರೇವ್ ಅವರ ಅನುಪಸ್ಥಿತಿಯಿಂದಾಗಿ ಅವರಿಬ್ಬರಿಗೆ ಮೊದಲೆರಡು ಶ್ರೇಯಾಂಕ ಸಿಕ್ಕಿದೆ. ಆಲ್ ಇಂಗ್ಲೆಂಡ್ ಕ್ಲಬ್‌ನ ನಿರ್ಧಾರದಂತೆ ಅಗ್ರ ರ್‍ಯಾಂಕಿನ ರಷ್ಯದ ಮೆಡ್ವೆಡೇವ್ ವಿಂಬಲ್ಡನ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ.
ರಷ್ಯಾವು ಉಕ್ರೇನ್ ಮೇಲೆ ಯುದ್ಧ ಸಾರಿದ ಕಾರಣಕ್ಕಾಗಿ ರಷ್ಯಾ ಮತ್ತು ಬೆಲರೂಸ್‌ನ ಆಟಗಾರರಿಗೆ ವಿಂಬಲ್ಡನ್ ನಲ್ಲಿ ಆಡದಂತೆ ಆಲ್ ಇಂಗ್ಲೆಂಡ್ ನಿಷೇಧ ಹೇರಿದೆ. ಎರಡನೇ ರ್‍ಯಾಂಕಿನ ಜ್ವರೇವ್ ಪಾದದ ಗಾಯದಿಂದ ಬಳಲುತ್ತಿದ್ದಾರೆ.
ಈ ಕಾರಣದಿಂದಾಗಿ ಜೊಕೋವಿಕ್ ಮತ್ತು ನಡಾಲ್ ಅವರಿಗೆ ಮೊದಲೆರಡು ಶ್ರೇಯಾಂಕ ಸಿಕ್ಕಿದೆ.
ಇದರಿಂದಾಗಿ ಅವರಿಬ್ಬರು ಫೈನಲ್ ಮೊದಲು ಮುಖಾಮುಖಿಯಾಗುವುದಿಲ್ಲ. ಆದರೆ ಕಳೆದ ಫ್ರೆಂಚ್ ಓಪನ್‌ನಲ್ಲಿ ಹೀಗೆ ಆಗಿರಲಿಲ್ಲ. ಅಲ್ಲಿ ಅವರಿಬ್ಬರು ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿ ಯಾಗಿದ್ದರು. ಈ ಹೋರಾಟದಲ್ಲಿ ಗೆದ್ದ ನಡಾಲ್ ಅಂತಿಮವಾಗಿ ಪ್ರಶಸ್ತಿ ಜಯಿಸಿದ್ದರು.
ವನಿತೆಯರ ಡ್ರಾದಲ್ಲಿ 23 ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಇದ್ದರೂ ಅವರಿಗೆ ಶ್ರೇಯಾಂಕ ಸಿಕ್ಕಿಲ್ಲ. ಪೋಲಂಡಿನ ಇಗಾ ಸ್ವಿಯಾಟೆಕ್‌ಗೆ ಅಗ್ರ ಶ್ರೇಯಾಂಕ ನೀಡಲಾಗಿದೆ. ಮುಂದಿನ ಸೋಮವಾರ ವಿಂಬಲ್ಡನ್ ಆರಂಭವಾಗಲಿದೆ.