Advertisement
ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಪ್ರಶಸ್ತಿ ಉಳಿಸಿಕೊಳ್ಳುವರೇ ಅಥವಾ ಇದಕ್ಕೆ ಬೇರೆ ವಾರಸುದಾರರು ಬಂದಾರೆಯೇ, ವನಿತಾ ಚಾಂಪಿಯನ್ ಆ್ಯಶ್ಲಿ ಬಾರ್ಟಿ ನಿವೃತ್ತಿ ಆಗಿರುವುದರಿಂದ ಈ ಬಾರಿಯ ಕಿರೀಟ ಯಾರಿಗೆ… ಎಂಬುದೆಲ್ಲ ಈ ವಿಂಬಲ್ಡನ್ ಕೂಟವನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ.
ಈ ಸಂದರ್ಭದಲ್ಲಿ ಪೋಲೆಂಡ್ ಆಟಗಾರ್ತಿ ಐಗಾ ಸ್ವಿಯಾಟೆಕ್ ಆಟ, ಸಾಧನೆ ಕಣ್ಮುಂದೆ ಸುಳಿಯುತ್ತದೆ. ಅಗ್ರ ರ್‍ಯಾಂಕಿಂಗ್ ಹಾಗೂ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿರುವ ಸ್ವಿಯಾಟೆಕ್ ಈ ಶತಮಾನದಲ್ಲಿ ಸಾಧಿಸಿದ ಸತತ 35 ಗೆಲು ವಿನ ಜಂಟಿ ದಾಖಲೆಯೊಂದಿಗೆ ಕಣಕ್ಕೆ ಧುಮುಕುತ್ತಿದ್ದಾರೆ. ವೀನಸ್ ವಿಲಿಯಮ್ಸ್ ಕೂಡ ಇಷ್ಟೇ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನ ಪಂದ್ಯ ಗೆದ್ದರೆ ಸ್ವಿಯಾಟೆಕ್ ಹೊಸ ಎತ್ತರ ತಲುಪುವರು. ಶತಮಾನದ ಸತತ ಗೆಲುವಿನ ಸಾಧನೆ ಯಲ್ಲಿ ಇವರಿಗಿಂತ ಮುಂದಿರುವ ಇಬ್ಬರೂ ಪುರುಷ ಟೆನಿಸಿಗರು ಎಂಬುದನ್ನು ಗಮನಿಸಬೇಕು. ಇವರೆಂದರೆ ನೊವಾಕ್ ಜೊಕೋವಿಕ್ (43) ಮತ್ತು ರೋಜರ್ ಫೆಡರರ್ (41).
Related Articles
Advertisement
“ವೀನಸ್ ವಿಲಿಯಮ್ಸ್ ಅವರನ್ನು ಮೀರಿ ನಿಲ್ಲುವುದೆಂದರೆ ಅದೊಂದು ವಿಶೇಷ ಸಾಧನೆ’ ಎಂಬುದು ಸ್ವಿಯಾಟೆಕ್ ಅವರ ಖುಷಿಯ ನುಡಿಗಳು. ಅಷ್ಟೇ ಅಲ್ಲ, 21 ವರ್ಷದೊಳಗೆ ಸತತ 7 ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗಳಲ್ಲಿ 4ನೇ ಹಾಗೂ ಇದರಾಚೆಯ ಸುತ್ತು ತಲುಪಿದ ವಿಶ್ವದ ಏಕೈಕ ಆಟಗಾರ್ತಿ ಎಂಬುದೂ ಸ್ವಿಯಾಟೆಕ್ ಪಾಲಿನ ಹೆಗ್ಗಳಿಕೆ.
ಜೊಕೋ ಸೋಲದೆ 5 ವರ್ಷ!ಜೊಕೋವಿಕ್ ಕೂಡ ವಿಂಬಲ್ಡನ್‌ನಲ್ಲಿ ವಿಶೇಷ ದಾಖಲೆ ಸ್ಥಾಪಿಸಿದ್ದಾರೆ. ಇವರಿಲ್ಲಿ ಸೋಲದೆ 5 ವರ್ಷಗಳೇ ಉರುಳಿವೆ! ಅದು 2017ರ ಟೂರ್ನಿ. ಅದು ಕೂಡ ಸೋಲಲ್ಲ. ಥಾಮಸ್ ಬೆರ್ಡಿಶ್ ಎದುರಿನ ಪಂದ್ಯದಲ್ಲಿ ಗಾಯಾಳಾಗಿ ನಿವೃತ್ತರಾಗಿದ್ದರು. 2018ರಿಂದ ಮೊದಲ್ಗೊಂಡು ಸತತ 3 ವರ್ಷ ವಿಂಬಲ್ಡನ್‌ಗೆ ಜೊಕೋ ಅವರೇ ಕಿಂಗ್. 2020ರಲ್ಲಿ ಕೋವಿಡ್ ಕಾರಣದಿಂದ ಟೂರ್ನಿ ನಡೆದಿರಲಿಲ್ಲ. ಈ ಬಾರಿ ಜೊಕೋವಿಕ್ ಗೆದ್ದರೆ 2007ರ ರೋಜರ್ ಫೆಡರರ್ ಸಾಧನೆ ಬಳಿಕ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಲಿದ್ದಾರೆ. ಅಂದು ಫೆಡರರ್ ಸತತ 5ನೇ ವಿಂಬಲ್ಡನ್ ಕಿರೀಟ ಧರಿಸಿದ್ದರು. 6 ಬಾರಿಯ ವಿಂಬಲ್ಡನ್ ಚಾಂಪಿಯನ್ ಜೊಕೋವಿಕ್ “ಆಲ್ ಇಂಗ್ಲೆಂಡ್ ಕ್ಲಬ್’ನಲ್ಲಿ ಸತತ 21 ಪಂದ್ಯಗಳ ಗೆಲುವಿನ ದಾಖಲೆ ಹೊಂದಿದ್ದಾರೆ. ರಫೆಲ್ ನಡಾಲ್ ಕೂಡ ವಿಶಿಷ್ಟ ಸಾಧನೆ ಯೊಂದಿಗೆ ಹೋರಾಟ ಆರಂಭಿಸುವರು. ಅವರು ಮೊದಲ ಬಾರಿಗೆ ವರ್ಷದ ಮೊದಲೆರಡು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದು ವಿಂಬಲ್ಡನ್ ಆಡಲು ಇಳಿಯುತ್ತಿದ್ದಾರೆ. 2022ರ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿಗಳೆರಡೂ ನಡಾಲ್ ಪಾಲಾಗಿವೆ.