Advertisement
ಬೆರೆಟಿನಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್. ಇಟಲಿ ಟೆನಿಸಿಗನೋರ್ವ ವಿಂಬಲ್ಡನ್ ಪ್ರಶಸ್ತಿ ಸುತ್ತಿಗೆ ಏರಿದ ಮೊದಲ ನಿದರ್ಶನವೂ ಇದಾಗಿದೆ. ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದ್ದರೂ ತನ್ನ ಮುಂದಿನ ಸವಾಲು ಸುಲಭದ್ದಲ್ಲ ಎಂಬುದು ಸ್ವತಃ ಬೆರೆಟಿನಿಗೇ ತಿಳಿದಿರುವ ಸತ್ಯ. ಟೆನಿಸ್ ಪಂಡಿತರ ಲೆಕ್ಕಾಚಾರದಲ್ಲಿ, 30ನೇ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಲಗ್ಗೆ ಹಾಕಿರುವ ಜೊಕೋವಿಕ್ 6ನೇ ವಿಂಬಲ್ಡನ್ ಪ್ರಶಸ್ತಿಯನ್ನೆತ್ತಿ ಹ್ಯಾಟ್ರಿಕ್ ಸಾಧಿಸುವುದು ಬಹುತೇಕ ಖಚಿತ.
2018ರಲ್ಲಿ ಕೆವಿನ್ ಆ್ಯಂಡರ್ಸನ್ ಅವರನ್ನು ಮಣಿಸಿ, 2019ರಲ್ಲಿ ರೋಜರ್ ಫೆಡರರ್ ಅವರನ್ನು ಹಿಮ್ಮೆಟ್ಟಿಸುವ ಮೂಲಕ ಜೊಕೋವಿಕ್ ವಿಂಬಲ್ಡನ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು. ಕೋವಿಡ್ ಕಾರಣದಿಂದ 2020ರಲ್ಲಿ ವಿಂಬಲ್ಡನ್ ನಡೆದಿರಲಿಲ್ಲ.
ಈ ವರ್ಷದ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಲಿಕ್ಕೂ ಜೊಕೋಗೆ ಇದು ಸುವರ್ಣಾವಕಾಶ. ಇದಕ್ಕೂ ಮುನ್ನ ಪ್ರಸಕ್ತ ಋತುವಿನ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಕೂಟಗಳಲ್ಲೂ ಜೊಕೋ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ರವಿವಾರ ಚಾಂಪಿಯನ್ ಎನಿಸಿದರೆ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ದಾಖಲೆಯನ್ನು ಜೊಕೋವಿಕ್ ಸರಿದೂಗಿಸಲಿದ್ದಾರೆ.