ಲಂಡನ್: ಮಾಜಿ ನಂ.1 ಶ್ರೇಯಾಂಕಿತ ಆಟಗಾರ್ತಿಯರಾದ ವಿಕ್ಟೋರಿಯಾ ಅಜರೆಂಕಾ ಮತ್ತು ಕ್ಯಾರೊಲಿನಾ ವೋಜ್ನಿಯಾಕಿ ವಿಂಬಲ್ಡನ್ ಸಿಂಗಲ್ಸ್‌ನಲ್ಲಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ವಿಶ್ವ ನಂ.6 ಶ್ರೇಯಾಂಕಿತ ಸ್ಲೊವೇಕಿಯಾದ ಡೊಮಿನಿಕಾ ಸಿಬುಲ್ಕೊವಾ ಸೋಲುಂಡಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಅಜರೆಂಕಾ 3-6, 6-1, 6-4 ರಿಂದ ಇಂಗ್ಲೆಂಡ್‌ನ ಹೆದರ್ ವಾಟ್ಸನ್ ವಿರುದ್ಧ ಜಯಸಾಧಿಸಿ ಪ್ರೀಕ್ವಾರ್ಟರ್‌ಗೆ ಪ್ರವೇಶಿಸಿದರು. ಮೊದಲ ಸೆಟ್ ಕಳೆದುಕೊಂಡ ಅಜರೆಂಕಾ 2 ಮತ್ತು 3ನೇ ಸೆಟ್‌ನಲ್ಲಿ ಗೆದ್ದು ಮೇಲುಗೈ ಸಾಧಿಸಿದರು.
ಮಹಿಳೆಯರ ಮತ್ತೂಂದು ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್‌ನ ಕ್ಯಾರೊಲಿನಾ ವೋಜ್ನಿಯಾಕಿ 6-3, 6-4 ರಿಂದ ಬಲ್ಗೇರಿಯಾದ ಟಿಸ್ವೆಟಾನಾ ಪಿರಂಕೊವಾ ವಿರುದ್ಧ ಸುಲಭ ಜಯ ಸಾಧಿಸಿದರು. ಎರಡೂ ಸೆಟ್‌ನಲ್ಲಿ ಭರ್ಜರಿ ಹೋರಾಟ ಪ್ರದರ್ಶಿಸಿದ ಒಜ್ನಿಯಾಕಿ ಯಾವುದೇ ಹಂತದಲ್ಲಿಯೂ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡದೇ ನೇರ ಸೆಟ್‌ನಲ್ಲಿಯೇ ಜಯಗಳಿಸಿದರು. 3ನೇ ಸುತ್ತಿನ ಇನ್ನೊಂದು ಸಿಂಗಲ್ಸ್‌ನಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದ ಸಿಬುಲ್ಕೊವಾ 6-7(3-7), 6-3, 4-6ರಿಂದ ಕ್ರೊವೇಷ್ಯಾದ 29ನೇ ಶ್ರೇಯಾಂಕಿತ ಅನಾ ಕೊಂಜು ವಿರುದ್ಧ ಆಘಾತಕೊಳಗಾದರು.
ನಿಶಿಕೋರಿಗೆ ಆಘಾತಕಾರಿ ಸೋಲು: ಪುರುಷರ ಸಿಂಗಲ್ಸ್‌ನಲ್ಲಿ ಏಷ್ಯಾದ ನಂ.1 ಆಟಗಾರ ಜಪಾನಿನ ಕೀ ನಿಶಿಕೋರಿ ಆಘಾತಕಾರಿ ಸೋಲು ಕಂಡಿದ್ದಾರೆ. 3ನೇ ಸುತ್ತಿನ ಪಂದ್ಯದಲ್ಲಿ ಬಟಿಸ್ಟಾ ವಿರುದ್ಧ 6-4, 7-6(7-3), 3-6, 6-3ರಿಂದ ಜಪಾನಿನ ಕೀ ನಿಶಿಕೊರಿ ಪರಾಜಯಗೊಂಡರು. ಗೆದ್ದ ಬಟಿಸ್ಟಾ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮತ್ತೂಂದು ಪಂದ್ಯದಲ್ಲಿ ಮುಲ್ಲರ್ 7-6(7-4), 7-5, 6-4ರಿಂದ ಅಲ್‌ಜಾಜ್ ಬೆಡೆನೆ ವಿರುದ್ಧ ಗೆಲುವು ಪಡೆದು ಪ್ರೀಕ್ವಾರ್ಟರ್‌ಗೆ ಲಗ್ಗೆ ಹಾಕಿದ್ದಾರೆ.
ಫೆಡರರ್ 3ನೇ ಸುತ್ತಿಗೆ: ಮಾಜಿ ವಿಶ್ವ ನಂ.1 ಶ್ರೇಯಾಂಕಿತ, 18 ಗ್ರ್ಯಾನ್‌ಸ್ಲಾಮ್ ವಿಜೇತ ರೋಜರ್ ಫೆಡರರ್ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಪುರುಷರ 2ನೇ ಸುತ್ತಿನ ಪಂದ್ಯದಲ್ಲಿ ಸ್ವಿಸ್‌ನ ಫೆಡರರ್ 7-6(7-0), 6-3, 6-2 ರಿಂದ ಸರ್ಬಿಯಾದ ಡುಸಾನ್ ಲಾಜೊವಿಚ್ ವಿರುದ್ಧ ಜಯ ಸಾಧಿಸಿ 3ನೇ ಸುತ್ತಿಗೆ ಪ್ರವೇಶಿಸಿದರು. ಮೊದಲ ಸೆಟ್‌ನಲ್ಲಿ ಫೆಡರರ್‌ಗೆ ಸ್ಪರ್ಧೆ ಕಂಡುಬಂತು. ಆದರೂ ಅಂತಿಮವಾಗಿ ಮೇಲುಗೈ ಸಾಧಿಸಿದರು. 2 ಮತ್ತು 3ನೇ ಸೆಟ್ ಅನ್ನು ಸುಲಭವಾಗಿ ವಶಪಡಿಸಿಕೊಂಡು ಮುಂದಿನ ಹಂತಕ್ಕೆ ಪ್ರವೇಶಿಸಿದರು.