Advertisement

Wimbledon 2023;ವಿಂಬಲ್ಡನ್‌ಗೆ ಅಲ್ಕ ರಾಜ: ಜೊಕೋವಿಕ್‌ರನ್ನು ಕೆಡಹಿದ ಸ್ಪೇನ್‌ನ ಕಾರ್ಲೋಸ್‌

11:52 PM Jul 16, 2023 | Team Udayavani |

ಲಂಡನ್‌: ವಿಶ್ವದ ಎರಡನೇ ರ್‍ಯಾಂಕಿನ ನೋವಾಕ್‌ ಜೊಕೋವಿಕ್‌ ಅವರನ್ನು ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಕೆಡಹಿದ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ವಿಂಬಲ್ಡನ್‌ ಪ್ರಶಸ್ತಿಯನ್ನು ಚೊಚ್ಚಲ ಬಾರಿ ಗೆದ್ದುಕೊಂಡರು.

Advertisement

ರವಿವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಅಲ್ಕರಾಜ್‌ ಅವರು 1-6, 7-6 (8-6), 6-1, 3-6, 6-4 ಸೆಟ್‌ಗಳಿಂದ ಜೊಕೋವಿಕ್‌ ಅವರನ್ನು ಉರುಳಿಸಲು ಯಶಸ್ವಿಯಾದರು. ಇದು ಅಲ್ಕರಾಜ್‌ ಅವರ ಎರಡನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯಾಗಿದೆ.

ಮೊದಲ ಸೆಟ್‌ 6-1ರಿಂದ ಸುಲಭದಲ್ಲಿ ಜೊಕೋವಿಕ್‌ ಪಾಲಾಯಿತು. ಮುಂದಿನೆರಡು ಸೆಟ್‌ಗಳಲ್ಲಿ ಅಲ್ಕರಾಜ್‌ ತಿರುಗಿ ಬಿದ್ದರು. 7-6 (8-6), 6-1ರಿಂದ ಗೆದ್ದು ಬಂದರು. 4ನೇ ಸೆಟ್‌ ಮರಳಿ ಜೊಕೋ ಪಾಲಾಯಿತು (6-3). ನಿರ್ಣಾಯಕ ಐದನೇ ಸೆಟ್‌ನಲ್ಲಿ ಅಮೋಘವಾಗಿ ಆಡಿದ ಅಲ್ಕರಾಜ್‌ ಅವರು ಜೊಕೋವಿಕ್‌ ಅವರಿಗೆ ಮೇಲುಗೈ ಸಾಧಿಸಲು ಅವಕಾಶ ನೀಡದೆ 6-4 ಅಂತರದಿಂದ ಗೆದ್ದು ಸಂಭ್ರಮಿಸಿದರು. ಈ ಮೂಲಕ ಜೊಕೋವಿಕ್‌ ಅವರ ದಾಖಲೆ 24ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲಲು ಕನಸನ್ನು ನುಚ್ಚುನೂರು ಮಾಡಿದರು. ಜೊಕೋವಿಕ್‌ ಇಲ್ಲಿ ನಾಲ್ಕು ಬಾರಿ ಪ್ರಶಸ್ತಿ ಜಯಿಸಿದ್ದು ಈ ಬಾರಿ ಫೈನಲ್‌ನಲ್ಲಿ ಎಡವಿದರು. ಇದು ನೊವಾಕ್‌ ಜೊಕೋವಿಕ್‌-ಕಾರ್ಲೋಸ್‌ ಅಲ್ಕರಾಜ್‌ ನಡುವಿನ ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಎಂಬುದು ವಿಶೇಷ.

“ನಾನು ಉತ್ತಮ ಆಟಗಾರನ ಎದುರು ಸೋತಿದ್ದೇನೆ. ಹಾಗಾಗಿ ನಾನು ಅವನನ್ನು ಅಭಿನಂದಿಸುತ್ತೇನೆ. ಅವನು ಮುಂದುವರಿಯಬೇಕು. ನನ್ನ ಮಗನಂತೆ ನೋಡಲು ಸಂತೋಷವಾಗಿದೆ” ಎಂದು ಜೋಕೊ ಅವರು ಕಣ್ಣೀರು ಹಾಕಿದರು.

ಅಲ್ಕರಾಜ್ ಜೊಕೊ ವೀಕ್ ಅವರಿಗೆ ಗೌರವ ಸಲ್ಲಿಸಿ,”ನೀವು ನನಗೆ ತುಂಬಾ ಸ್ಫೂರ್ತಿ ನೀಡಿದ್ದೀರಿ. ನಾನು ನಿಮ್ಮನ್ನು ನೋಡುತ್ತಾ ಟೆನಿಸ್ ಆಡಲು ಪ್ರಾರಂಭಿಸಿದೆ” ಎಂದು ಹೇಳಿದರು.

Advertisement

ಡಬಲ್ಸ್‌  ಚಾಂಪಿಯನ್ಸ್‌
ಬ್ರಿಟನ್‌ನ ನೀಲ್‌ ಸ್ಕಪ್‌ಸ್ಕಿ ಮತ್ತು ನೆದರ್ಲೆಂಡ್ಸ್‌ನ ವೆಸ್ಲಿ ಕೂಲೋಫ್ ಸೇರಿಕೊಂಡು ವಿಂಬಲ್ಡನ್‌ ಪುರುಷರ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ. ಇವರು ಸ್ಪೇನ್‌ನ ಮಾರ್ಸೆಲ್‌ ಗ್ರಾನೋಲ್ಲರ್-ಆರ್ಜೆಂಟೀನಾದ ಹೊರಾಶಿಯೊ ಝೆಬಲ್ಲೋಸ್‌ ವಿರುದ್ಧ 6-4, 6-4 ಅಂತರದ ಗೆಲುವು ಸಾಧಿಸಿದರು.
ಬ್ರಿಟನ್‌ ಆಟಗಾರನೊಬ್ಬನಿಗೆ ವಿಂಬಲ್ಡನ್‌ ಡಬಲ್ಸ್‌ ಪ್ರಶಸ್ತಿ ಒಲಿದದ್ದು 2012ರ ಬಳಿಕ ಇದೇ ಮೊದಲು. ಅಂದು ಜೊನಾಥನ್‌ ಮರ್ರೆ ಡೆನ್ಮಾರ್ಕ್‌ನ ಫ್ರೆಡರಿಕ್‌ ನೀಲ್ಸನ್‌ ಜತೆಗೂಡಿ ಚಾಂಪಿಯನ್‌ ಆಗಿದ್ದರು.

ಹಾಗೆಯೇ ಗ್ರಾನೋಲ್ಲರ್-ಝೆಬಲ್ಲೋಸ್‌ ಜೋಡಿಗೆ ಇದು ವಿಂಬಲ್ಡನ್‌ ಫೈನಲ್‌ನಲ್ಲಿ ಎದುರಾದ 2ನೇ ಸೋಲು. 2021ರಲ್ಲಿ ಇವರು ನಿಕೋಲ ಮೆಕ್ಟಿಕ್‌-ಮೇಟ್‌ ಪಾವಿಕ್‌ ವಿರುದ್ಧ ಎಡವಿದ್ದರು.

ಮಿಕ್ಸೆಡ್‌ ಡಬಲ್ಸ್‌
ವಿಂಬಲ್ಡನ್‌ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ ಉಕ್ರೇನ್‌ನ ಲಿಡ್ಮಿಲಾ ಕಿಶೆನೋಕ್‌-ಕ್ರೊವೇಶಿಯಾದ ಮೇಟ್‌ ಪಾವಿಕ್‌ ಪಾಲಾಗಿದೆ. 7ನೇ ಶ್ರೇಯಾಂಕದ ಈ ಜೋಡಿ ಬೆಲ್ಜಿಯಂನ ಜೊರಾನ್‌ ಲೀಜೆನ್‌-ಚೀನದ ಕ್ಸು ಯಿಫಾನ್‌ ಅವರನ್ನು 6-4, 6-7 (9), 6-3 ಅಂತರದಿಂದ ಪರಾಭವಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next