ಲಂಡನ್: ಕೋವಿಡ್ 19 ವೈರಸ್ ನ ಉಗ್ರರೂಪದಿಂದಾಗಿ ವಿಂಬಲ್ಡನ್ ಟೆನಿಸ್ ಕೂಟ ರದ್ದುಗೊಂಡಿದೆ. ಇದರಿಂದಾಗಿ ವಿಂಬಲ್ಡನ್ ಟೆನಿಸ್ ಕೂಟ ಎರಡನೇ ವಿಶ್ವ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ರದ್ದಾಗಿದೆ.
ಆಲ್ ಇಂಗ್ಲೆಂಡ್ ಕ್ಲಬ್ ಬುಧವಾರ ನಡೆಸಿದ ತುರ್ತು ಸಭೆಯಲ್ಲಿ 2020ರ ಮಟ್ಟಿಗೆ ಈ ಕೂಟವನ್ನು ರದ್ದುಮಾಡಲು ನಿರ್ಧರಿಸಿದೆ. ಇದರಿಂದಾಗಿ ಅತ್ಯಂತ ಹಿರಿಯ ಗ್ರ್ಯಾನ್ ಸ್ಲಾಮ್ ಕೂಟವಾದ ವಿಂಬಲ್ಡನ್ ಈ ವರ್ಷ ನಡೆಯುವುದಿಲ್ಲ.
ವಿಂಬಲ್ಡನ್ ಕೂಟವು ಕ್ಲಬ್‌ನ ಹುಲ್ಲುಹಾಸಿನ ಅಂಗಣದಲ್ಲಿ ಜೂನ್ 29ರಿಂದ ಜುಲೈ 12ರ ವರೆಗೆ ನಡೆಯಬೇಕಿತ್ತು. ಇದರ ಬದಲು ಮುಂದಿನ ವಿಂಬಲ್ಡನ್ ಕೂಟವು 2021ರ ಜೂನ್ 28ರಿಂದ ಜುಲೈ 12ರ ವರೆಗೆ ನಡೆಯಲಿದೆ.
ವಿಂಬಲ್ಡನ್ ಕೂಟ 1877ರಲ್ಲಿ ಮೊದಲ ಬಾರಿಗೆ ನಡೆದಿತ್ತು. ಆಬಳಿಕ ಪ್ರತಿವರ್ಷವೂ ಈ ಕೂಟ ನಡೆದಿತ್ತು. ಆದರೆ ಮೊದಲ (1915-18 ಮತ್ತು ಎರಡನೇ (1940-45) ಮಹಾಯುದ್ದದ ಸಮಯದಲ್ಲಿ ಈ ಕೂಟ ನಡೆದಿರಲಿಲ್ಲ.
ಒಲಿಂಪಿಕ್ಸ್, ಐಪಿಎಲ್ ಸೇರಿದಂತೆ ಹಲವಾರು ಕೂಟಗಳು ಈ ವರ್ಷ ರದ್ದುಗೊಂಡು ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಇದೀಗ ಈ ಸಾಲಿಗೆ ಪ್ರತಿಷ್ಠಿತ ವಿಂಬಲ್ಡನ್ ಕೂಡ ಸೇರಿಕೊಂಡಿದೆ. ಈ ಮೊದಲೇ ವಿಂಬಲ್ಡನ್ ಕೂಟ ರದ್ದಾಗಬಹುದು ಎಂದು ಅಂದಾಜಿಸಲಾಗಿತ್ತು.
ಸಂಘಟಕರು ಮುಚ್ಚಿದ ಬಾಗಿಲಿನಲ್ಲಿ ಅಭಿಮಾನಿಗಳಿಲ್ಲದೆ ಕೂಟವನ್ನು ಆಯೋಜಿಸುತ್ತೇವೆ ಎಂದಿದ್ದರು, ಇದಕ್ಕೆ ಕೆಲವರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಇದೀಗ ಕೂಟವನ್ನು ರದ್ದು ಮಾಡುವಂತೆ ಸಂಘಟಕರಿಗೆ ಎಲ್ಲ ಕಡೆಯಿಂದ ಒತ್ತಡ ಬಂದಿತ್ತು.