Advertisement

ವಿಂಬಲ್ಡನ್‌ ಮರಿನ್‌ ಸಿಲಿಕ್‌ ಫೈನಲ್‌ಗೆ

03:00 AM Jul 15, 2017 | |

ಲಂಡನ್‌: 2014 ಯುಎಸ್‌ ಗ್ರ್ಯಾನ್‌ಸ್ಲಾಮ್‌ ವಿಜೇತ ಕ್ರೊವೇಶಿಯಾದ ಮರಿನ್‌ ಸಿಲಿಕ್‌ ವಿಂಬಲ್ಡನ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಇದು ಸಿಲಿಕ್‌ಗೆ ವಿಂಬಲ್ಡನ್‌ನಲ್ಲಿ ಮೊದಲ ಮತ್ತು ಒಟ್ಟಾರೆ 2ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿದೆ.

Advertisement

ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸಿಲಿಕ್‌ 6-7(6-8), 6-4, 7-6(7-3), 7-5 ರಿಂದ ಅಮೆರಿಕದ ಸ್ಯಾಮ್‌ ಕೆರ್ರಿ ವಿರುದ್ಧ ಗೆಲುವು ಸಾಧಿಸಿದರು. ವಿಶ್ವದ ಆರನೇ ರ್‍ಯಾಂಕಿನ ಸಿಲಿಕ್‌ ಪಂದ್ಯದುದ್ದಕ್ಕೂ ಭರ್ಜರಿ ಹೋರಾಟ ಪ್ರದರ್ಶಿಸಿದರು. ಮೊದಲ ಸೆಟ್‌ನಲ್ಲಿ ಇಬ್ಬರ ನಡುವಿನ ಸಮಬಲದ ಹೋರಾಟದಿಂದ ಅಂಕಗಳು ಹಾವುಏಣಿ ಆಟದಂತೆ ಸಾಗುತ್ತಿದ್ದವು. ಆದರೆ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ ನಂಬರ್‌ ವನ್‌ ರ್‍ಯಾಂಕಿನ  ಆ್ಯಂಡಿ ಮರ್ರೆಯನ್ನು ಹೊರಗಟ್ಟಿದ ಕೆರ್ರಿ 7-6(8-6) ರಿಂದ ಗೆದ್ದು ಮೇಲುಗೈ ಸಾಧಿಸಿದರು. ಮೊದಲ ಸೆಟ್‌ ಅಂತ್ಯದ ಅನಂತರ ಅಕ್ಷರಶಃ ಸಿಲಿಕ್‌ ಅಬ್ಬರ ಆಟವನ್ನು ಪ್ರದರ್ಶಿಸಿದರು. 2ನೇ ಸೆಟ್‌ ಅನ್ನು ಸಿಲಿಕ್‌ ವಶಪಡಿಸಿಕೊಂಡು ಸಮಬಲ ಸಾಧಿಸಿದರು.

ಮೂರು, ನಾಲ್ಕನೇ ಸೆಟ್‌ನಲ್ಲಿ ತೀವ್ರ ಪೈಪೋಟಿ: ಇಬ್ಬರ ನಡುವಿನ ಕಾಳಗ ಮೂರು ಮತ್ತು ನಾಲ್ಕನೆ ಸೆಟ್‌ನಲ್ಲಿಯೂ ಮುಂದುವರಿಯಿತು. ಎರಡೂ ಕಡೆಯ ರ್ಯಾಕೆಟ್‌ನಿಂದ ನಿಖರ ಸರ್ವ್‌ಗಳು ಸಿಡಿಯುತ್ತಿದ್ದವು. ಕ್ರೀಡಾಭಿಮಾನಿಗಳಿಗೆ ಭರ್ಜರಿ ಮನರಂಜನೆ, ಯಾರು ಗೆಲ್ಲುತ್ತಾರೆ ಅನ್ನುವ ಕುತೂಹಲವನ್ನು ಸೆಟ್‌ನ ಅಂತ್ಯದವರೆಗೂ ಹಿಡಿದಿಟ್ಟಿತ್ತು. ಮೂರನೇ ಸೆಟ್‌ ಅನ್ನು ಸಿಲಿಕ್‌ 7-6(7-3) ವಶಪಡಿಸಿಕೊಂಡು ಮುನ್ನಡೆ ಸಾಧಿಸಿದರು. ನಾಲ್ಕನೇ ಸೆಟ್‌ನ ಆರಂಭದಲ್ಲಿ ಇಬ್ಬರ ಹೋರಾಟ ಸಮಬಲದಲ್ಲಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಿಲಿಕ್‌ ಮೇಲುಗೈ ಸಾಧಿಸಿ ಗೆಲುವಿನ ನಗೆ ಚೆಲ್ಲಿದರು. 29 ವರ್ಷದ ಸ್ಯಾಮ್‌ ಕೆರ್ರಿಗೆ ಇದು ಗ್ರ್ಯಾನ್‌ಸ್ಲಾಮ್‌ನಲ್ಲಿ ಮೊದಲ ಸೆಮಿಫೈನಲ್‌ ಆಗಿತ್ತು. ಆದರೆ ಸಿಲಿಕ್‌ ಅಬ್ಬರದಿಂದ ಫೈನಲ್‌ ತಲುಪುವ ಅವಕಾಶ ತಪ್ಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next