ಸೆರೆನಾ ವಿರುದ್ಧ 6-3, 6-3 ಸುಲಭ ಜಯ
ಕೆರ್ಬರ್‌ಗೆ ಮೊದಲ ವಿಂಬಲ್ಡನ್ ಪ್ರಶಸ್ತಿ
ಲಂಡನ್: 24ನೇ ಮಹಿಳಾ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಗೆದ್ದು ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟುವ ಸೆರೆನಾ ವಿಲಿಯಮ್ಸ್ ಕನಸು ಮಣ್ಣುಪಾಲಾಗಿದೆ. ಶನಿವಾರ ನಡೆದ ವಿಂಬಲ್ಡನ್ ಫೈನಲ್‌ನಲ್ಲಿ ಅವರು ಜರ್ಮನಿಯ ಏಂಜೆಲಿಕ್ ಕೆರ್ಬರ್ ವಿರುದ್ಧ 3-6, 3-6ರಿಂದ ಸೋತು ಹೋಗಿದ್ದಾರೆ. ಇದು ಕೆರ್ಬರ್ ಗೆದ್ದ ಮೊದಲ ವಿಂಬಲ್ಡನ್ ಪ್ರಶಸ್ತಿ ಎಂಬುದು ವಿಶೇಷ.
ಮಗು ಹೆತ್ತು ಬರೀ ಹತ್ತು ತಿಂಗಳಾಗುವಷ್ಟರಲ್ಲಿ ಸೆರೆನಾ ಗ್ರ್ಯಾನ್‌ಸ್ಲಾಮ್‌ವೊಂದರ ಫೈನಲ್‌ಗೇರಿರುವುದು ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಸೆರೆನಾ ಗೆದ್ದಿದ್ದರೆ ಇದು ಅವರ 8ನೇ ವಿಂಬಲ್ಡನ್ ಪ್ರಶಸ್ತಿಯಾಗಿರುತ್ತಿತ್ತು. ಒಟ್ಟಾರೆ 24ನೇ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಗೆದ್ದಂತಾಗುತ್ತಿತ್ತು. ಈ ಹಿಂದೆ ಮಾರ್ಗರೆಟ್ ಕೋರ್ಟ್ ಮಾತ್ರ 24 ಗ್ರ್ಯಾನ್‌ಸ್ಲಾಮ್ ಜಯಿಸಿದ್ದಾರೆ. ಆ್ಯಂಜೆಲಿಕ್ ಕೆರ್ಬರ್ ಸೆರೆನಾರನ್ನು ಸುಲಭವಾಗಿಯೇ ಸೋಲಿಸಿದರು. 2 ನೇರ ಸೆಟ್‌ಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿ ದರು. ಇದಕ್ಕೂ ಮುನ್ನ ಕೆರ್ಬರ್ ಆಸ್ಟ್ರೇಲಿಯನ್ ಓಪನ್ ಮತ್ತು ಯುಎಸ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು. ಇದು 1996ರ ಬಳಿಕ ಜರ್ಮನ್ ವನಿತೆಗೆ ಒಲಿದ ಮೊದಲ ವಿಂಬಲ್ಡನ್ ಪ್ರಶಸ್ತಿಯೂ ಹೌದು. ಅಂದು ಸ್ಟೆಫಿ ಗ್ರಾಫ್ ಈ ಸಾಧನೆ ಮಾಡಿದ್ದರು.