ದುಬೈ: ಐಸಿಸಿ ಟಿ20 ವಿಶ್ವಕಪ್ ನ ಹೈವೋಲ್ಟೆಜ್ ಮುಖಾಮುಖಿಯಲ್ಲಿ ಭಾರತ ತಂಡದ ವಿರುದ್ದ ಪಾಕಿಸ್ಥಾನ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ನಲ್ಲಿ ತನ್ನ ಸೋಲಿನ ಸರಪಣಿಯನ್ನು ತುಂಡರಿಸಿದೆ.
ಏಕಪಕ್ಷೀಯವಾಗಿ ಸಾಗಿದ ರವಿವಾರದ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಬಾಬರ್ ಆಜಂ ಪಡೆ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 151 ರನ್ ಗಳಿಸಿದರೆ, ಪಾಕಿಸ್ಥಾನ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಕಪ್ತಾನನ ಆಟವಾಡಿದ ವಿರಾಟ್ ಕೊಹ್ಲಿ ಅವರ ಅರ್ಧ ಶತಕ (57), ರಿಷಭ್ ಪಂತ್ ಅವರ ಬಿರುಸಿನ ಬ್ಯಾಟಿಂಗ್ (39) ಟೀಮ್ ಇಂಡಿಯಾ ಸರದಿಯ ಹೈಲೈಟ್ ಆಗಿತ್ತು. ಆದರೆ ಪಾಕಿಸ್ಥಾನದ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ (79) ಮತ್ತು ಬಾಬರ್ ಆಜಂ ( 68) ಇಬ್ಬರೇ ಸೇರಿಕೊಂಡು ಈ ಮೊತ್ತವನ್ನು ಬೆನ್ನಟ್ಟಿದರು. ಒಂದೂ ವಿಕೆಟ್ ಕೀಳಲಾಗದಿದ್ದುದು ಭಾರತೀಯ ಬೌಲಿಂಗಿನ ಮಹಾ ದುರಂತವೆನಿಸಿತು.
ಇದನ್ನೂ ಓದಿ:ಅಫ್ಘಾನ್-ಸ್ಕಾಟ್ಲೆಂಡ್: ಸಮಬಲರ ಸೆಣಸಾಟ
ಭಾರತದ ಆರಂಭಿಕರಾದ ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ನಿರಾಸೆ ಅನುಭವಿಸಿದರು. ರೋಹಿತ್ ಮೊದಲ ಎಸೆತಕ್ಕೆ ಔಟಾದರೆ, ಮೂರು ರನ್ ಗೆ ಆಟ ಮುಗಿಸಿದರು. ಇಬ್ಬರೂ ಶಹೀನ್ ಶಾ ಅಫ್ರಿದಿ ಎಸೆತಕ್ಕೆ ಔಟಾದರು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ವಿಚಿತ್ರ ಪ್ರಶ್ನೆಯೊಂದನ್ನು ಎದುರಿಸಿದರು. ”ತಂಡದ ಆಯ್ಕೆಗೆ ಸಂಬಂಧಿಸಿದಂತೆ ಅಭ್ಯಾಸ ಪಂದ್ಯದಲ್ಲಿ ಇಶಾನ್ ಕಿಶನ್ ಚೆನ್ನಾಗಿ ಆಡಿದರು. ಇಶಾನ್ ಕಿಶನ್ ಆಡಿದರೆ ಅದು ತಪ್ಪು ಎಂದು ನೀವು ಭಾವಿಸುತ್ತೀರಾ ಮತ್ತು ಅವರು ರೋಹಿತ್ ಶರ್ಮಾ ಅವರಿಗಿಂತ ಉತ್ತಮವಾಗಿ ಮಾಡಬಹುದು?” ಎಂದು ಪತ್ರಕರ್ತರೊಬ್ಬರು ಕೇಳಿದಾಗ ವಿರಾಟ್ ನಕ್ಕರು.
“ಇದು ತುಂಬಾ ಧೈರ್ಯದ ಪ್ರಶ್ನೆ. ನಿಮ್ಮ ಅಭಿಪ್ರಾಯವೇನು ಸರ್? ನಾನು ಅತ್ಯುತ್ತಮ ಎಂದು ಭಾವಿಸಿದ ತಂಡವನ್ನು ಆಡಿದ್ದೇನೆ. ನಿಮ್ಮ ಅಭಿಪ್ರಾಯ ಏನು?” ಎಂದು ವಿರಾಟ್ ಮರುಪ್ರಶ್ನೆ ಎಸೆದರು.
“ನೀವು ರೋಹಿತ್ ಶರ್ಮಾ ಅವರನ್ನು ಟಿ 20 ಅಂತರಾಷ್ಟ್ರೀಯ ಪಂದ್ಯದಿಂದ ಕೈಬಿಡುತ್ತೀರಾ? ನೀವು ‘ರೋಹಿತ್ ಶರ್ಮಾ’ ಅವರನ್ನು ಕೈಬಿಡುತ್ತೀರಾ? ನಾವು ಆಡಿದ ಕೊನೆಯ ಪಂದ್ಯದಲ್ಲಿ ಆತ ಏನು ಮಾಡಿದನೆಂದು ನಿಮಗೆ ತಿಳಿದಿದೆಯೇ? ಇದು ನಂಬಲಾಗದು” ಎಂದು ವಿರಾಟ್ ಮುಖಕ್ಕೆ ಕೈ ಅಡ್ಡ ಹಿಡಿದು ನಕ್ಕರು.
ಮುಂದುವರಿದು ವಿರಾಟ್, ”ಸರ್, ನಿಮಗೆ ವಿವಾದ ಬೇಕಾದರೆ, ದಯವಿಟ್ಟು ಮೊದಲು ನನಗೆ ತಿಳಿಸಿ. ನಾನು ಅದಕ್ಕೆ ತಕ್ಕಂತೆ ಉತ್ತರಿಸುತ್ತೇನೆ, “ಎಂದು ನೇರವಾಗಿಯೇ ಹೇಳಿದರು.