Advertisement

ರಾಜ್ಯ ಸರ್ಕಾರದ ಲೆಕ್ಕ ಕೇಳಲು ನೀವ್ಯಾರು?

06:45 AM Aug 17, 2017 | Team Udayavani |

ಬೆಂಗಳೂರು: “ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೀಡಿದ ಅನುದಾನದ ಲೆಕ್ಕ ಕೇಳಲು ನೀವ್ಯಾರು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

Advertisement

ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರದಿಂದ ವಿವಿಧ ತೆರಿಗೆ ಮೂಲಕ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ಕೋಟಿ ರೂ. ಆದಾಯ ಹೋಗುತ್ತದೆ. ಆ ಹಣದಲ್ಲಿ 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 2 ಲಕ್ಷ 7 ಸಾವಿರ ಕೋಟಿ ರೂ.ಅನುದಾನ ಹಂಚಿಕೆ ಮಾಡಿದೆ.

ಮೂರು ವರ್ಷದಲ್ಲಿ ಕೇಂದ್ರ ಸರ್ಕಾರ ಕೇವಲ 1 ಲಕ್ಷ 2 ಸಾವಿರ ಕೋಟಿ ರೂ. ಮಾತ್ರ ನೀಡಿದೆ. ನಮ್ಮ ಪಾಲಿನ ಹಣ ಕೊಡಿಸಿ’ ಎಂದು ಆಗ್ರಹಿಸಿದರು.

“ಕಳೆದ ಮೂರು ವರ್ಷದಲ್ಲಿ ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲಿ 10 ಸಾವಿರ ಕೋಟಿ ರೂ ಕಡಿತಗೊಳಿಸಲಾಗಿದೆ. ರಾಜ್ಯದ ಬಿಜೆಪಿ ನಾಯಕರು ಆ ಹಣವನ್ನು ಕೇಂದ್ರದಿಂದ ಕೊಡಿಸಲಿ’ ಎಂದರು. ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಅಮಿತ್‌ ಶಾಗೆ ಏನೂ ಗೊತ್ತಿಲ್ಲ.
ಅಮಿತ್‌ ಶಾಗೆ ಕ್ರಿಮಿನಲ್‌ ತಂತ್ರಗಾರಿಕೆ ಮಾಡುವುದು ಮಾತ್ರ ಗೊತ್ತು. ಪ್ರಜಾಪ್ರಭುತ್ವದ ರೀತಿಯಲ್ಲಿ ತಂತ್ರಗಾರಿಕೆ ಮಾಡುವುದು ಗೊತ್ತಿಲ್ಲ ಎಂದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅವರು ಸುಳ್ಳು ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದಟಛಿ ಆರೋಪ ಮಾಡುವಾಗ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪಕ್ಕದಲ್ಲಿಯೇ ಇದ್ದರು. ಸ್ವತ: ಅಮಿತ್‌ ಶಾ ಜೈಲಿಗೆ ಹೋಗಿ ಬಂದಿದ್ದಾರೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ  ರಾಜಸ್ಥಾನ ಸರ್ಕಾರಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ದೇಶದಲ್ಲಿ ಕರ್ನಾಟಕ ಒಂದೇ ಭ್ರಷ್ಟಾಚಾರ ಮುಕ್ತ ಸರ್ಕಾರ. ತಾಕತ್ತಿದ್ದರೆ ನಮ್ಮ ಸರ್ಕಾರದಲ್ಲಿನ ಸಚಿವರ ಮೇಲಿನ ಭ್ರಷ್ಟಾಚಾರ ಸಾಬೀತು ಮಾಡಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.

Advertisement

ರೈತರ ವಿಷಯದಲ್ಲಿ ಕೇಂದ್ರ ಸರ್ಕಾರ ಡೋಂಗಿತನ ತೋರಿಸುತ್ತಿದೆ. ರಾಜ್ಯ ಸರ್ಕಾರ 22 ಲಕ್ಷ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರ ಸಾಲ ಮನ್ನಾ ಮಾಡಲಿ. ಯಡಿಯೂರಪ್ಪ ನಿಜವಾಗಿಯೂ ರೈತರ ಪರವಾಗಿದ್ದರೆ ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಸಂಸತ್ತಿನ ಮುಂದೆ ಪ್ರತಿಭಟನೆ ಮಾಡಲಿ ಎಂದು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಜಾತಿ, ಧರ್ಮದ ಹೆಸರಿನಲ್ಲಿ ದೇಶದ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಡವರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ರಾಜ್ಯ ಸರ್ಕಾರದ ಸಾಧನೆಯನ್ನು ಸಹಿಸಲಾಗದೆ, ಐಟಿ, ಇಡಿ, ಸಿಬಿಐ ದುರುಪಯೋಗ ಪಡಿಸಿಕೊಂಡು ನಮ್ಮ ಸಚಿವರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಕೋಮು ಗಲಭೆ ಸೃಷ್ಠಿಸಿ ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇದ್ಯಾವುದನ್ನೂ ಸಹಿಸುವುದಿಲ್ಲ. ನೀವು ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

ಹಸಿವಿನ ಅರಿವಿಲ್ಲ: ಬಿಜೆಪಿಯವರು ಯಾವಾಗಲೂ ಬಡವರ ವಿರೋಧಿಗಳು. ಅವರಿಗೆ ಹಸಿವಿನ ಅರಿವಿಲ್ಲ. ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದಾಗಲೂ ವಿರೋಧಿಸಿ ದ್ದರು. ಈಗ ಇಂದಿರಾ ಕ್ಯಾಂಟೀನ್‌ ಆರಂಭಿಸುವಾಗಲೂ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಹಸಿದವರಿಗೆ ಮಾತ್ರ ಹಸಿವಿನ ಅರಿವಿರುತ್ತದೆ. ಪ್ರಜಾಪ್ರಭುತ್ವ ವಿರೋಧಗಳಿಗೆ ಹಸಿವಿನ ಅರಿವಿಲ್ಲ. ಬಡವರು ಎರಡು ಹೊತ್ತು ನೆಮ್ಮದಿಯಿಂದ ಊಟ ಮಾಡುವಂತಾದರೆ ಅದೇ ನಮಗೆ ತೃಪ್ತಿ ಎಂದು ಹೇಳಿದರು.

ಸಿಎಂ ಕಿಡಿನುಡಿ
– ಅಮಿತ್‌ ಶಾ ಗೆ ಕ್ರಿಮಿನಲ್‌ ತಂತ್ರಗಾರಿಕೆ ಮಾಡುವುದು ಮಾತ್ರ ಗೊತ್ತು
– ಐಟಿ, ಇಡಿ, ಸಿಬಿಐ ದುರುಪಯೋಗ ಪಡೆಸಿಕೊಂಡು ಸಚಿವರ ಮೇಲೆ ದಾಳಿ
– ನೀವು ತಿಪ್ಪರಲಾಗ ಹಾಕಿದರೂ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ
– ಬಿಜೆಪಿಯವರು ಯಾವಾಗಲೂ ಬಡವರ ವಿರೋಧಿಗಳು, ಅವರಿಗೆ ಹಸಿವಿನ ಅರಿವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next