ಗುಂಡ್ಲುಪೇಟೆ: ರಾಜ್ಯ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದ್ದು, ಇದರಲ್ಲಿ ಹಿರಿಯರಿಗೆ ಕೊಕ್ ಕೊಟ್ಟರೆ ಸ್ವಾಗತಿಸುತ್ತೇನೆ. ಅಂತೆಯೇ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಇನ್ನಷ್ಟು ಬಲ ಬರುತ್ತದೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಹೇಳಿದರು.
ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಿಗೆ ಕೊಕ್ ಕೊಟ್ಟು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡರೆ ಮುಂದಿನ ಬಾರಿಯು ಬಿಜೆಪಿ ಅಧಿಕಾರ ಹಿಡಿಯಬಹುದು. ಈಗಾಗಲೇ ನಾನು 9 ಬಾರಿ ಶಾಸಕನಾಗಿದ್ದೇನೆ ಎಂದರು.
ವಿಜಯೇಂದ್ರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರರಾಗಿದ್ದು, ಅವರಿಗೆ ಸಚಿವ ಸ್ಥಾನ ಕೊಟ್ಟರೆ ಪಕ್ಷದ ವರ್ಚಸ್ಸು ಇನ್ನಷ್ಟು ಹೆಚ್ಚಲಿದೆ. ಆದ್ದರಿಂದ ವಿಜಯೇಂದ್ರಗೆ ಸಚಿವ ಸ್ಥಾನ ಕೊಡಬೇಕು ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯನ್ನು ಜನರ ಅನುಕೂಲಕ್ಕಾಗಿ ವಿಭಜಿಸಬೇಕು, ಎಸಿ ಕಚೇರಿ ಇರುವ ಮೂರು ತಾಲೂಕುಗಳನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು. ಶೀಘ್ರವೇ ಸಿಎಂ ಅವರಿಗೆ ಜಿಲ್ಲೆಯನ್ನು ವಿಭಜಿಸಲು ಮನವಿ ಸಲ್ಲಿಸಲಾಗುವುದು, ಎಲ್ಲಾ ಶಾಸಕರ ಸಹಮತವೂ ಇದೆ ಎಂದರು.
ಇದೇ ವೇಳೆ, ಗೋಕಾಕ್ ಅನ್ನು ಜಿಲ್ಲಾಕೇಂದ್ರ ಮಾಡಬೇಕೆಂದು ಪ್ರತಿಭಟಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ನನಗೂ ಹುಕ್ಕೇರಿಯನ್ನು ಜಿಲ್ಲೆ ಮಾಡಬೇಕೆಂಬ ಆಸೆ ಇದೆ. ಆದರೆ, ಅವೆಲ್ಲಾ ಆಗಲ್ಲ, ಮೂರು ತಾಲೂಕುಗಳಲ್ಲಿ ಎಸಿ ಕಚೇರಿಗಳಿದ್ದು ಅವು ಜಿಲ್ಲೆಗಳಾಗಿವೆ ಎಂದು ಹೇಳಿದರು.