ಲಕ್ನೋ: “ಇಂಡಿಯಾ ಒಕ್ಕೂಟದ ನಾಯಕರು ಹಿಂದೂಗಳ ಶಕ್ತಿಯನ್ನು ನಾಶ ಮಾಡುವುದಾಗಿ ಸವಾಲೆಸೆದಿದ್ದಾರೆ. ಆದರೆ, ಜೂ.4ರ ನಂತರ ಮೋದಿ ಸರ್ಕಾರವು “ಶಕ್ತಿ’ಯನ್ನು “ಮಹಾಶಕ್ತಿ’ಯನ್ನಾಗಿ ಪರಿವರ್ತಿಸಲಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸ್ವಕ್ಷೇತ್ರ ವಾರಾಣಸಿಯಲ್ಲಿ ಮಂಗಳವಾರ 25 ಸಾವಿರ ಮಹಿಳೆಯರ ಉಪಸ್ಥಿತಿಯಲ್ಲಿ ನಡೆದ “ನಾರಿ ಶಕ್ತಿ ಸಂವಾದ’ದಲ್ಲಿ ಮಾತನಾಡಿದ ಅವರು, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿರುವ ಮಾತೃಶಕ್ತಿಯನ್ನು ಕಂಡು ಮನತುಂಬಿದೆ. ನನಗಾಗಿ ನೀವೆಲ್ಲರೂ ಸಮಯ ಮಾಡಿಕೊಂಡು ಇಲ್ಲಿಗೆ ಬಂದಿರುವಿರಿ, ನಿಮ್ಮೆಲ್ಲರಿಗೂ ನಾನು ಋಣಿ ಎಂದಿದ್ದಾರೆ.
ಇದೇ ವೇಳೆ ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ಧಾಳಿ ನಡೆಸಿ, “ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಎಲ್ಲಿ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲಾ ಮಹಿಳೆ ಸಂಕಷ್ಟ ಎದುರಿಸುತ್ತಾಳೆ. ವಾರಾಣಸಿಯ ಜನರಿಗೆ ಬಿಹಾರ, ಉತ್ತರ ಪ್ರದೇಶದ ಜಂಗಲ್ ರಾಜ್ ಆಡಳಿತಗಳ ಪರಿಚಯವಿದೆ. ಆ ಅವಧಿಯಲ್ಲಿ ಹೆಣ್ಣುಮಕ್ಕಳು ಶಾಲೆ ತೊರೆದು ಸುರಕ್ಷತೆಗಾಗಿ ಮನೆಯಲ್ಲೇ ಇರುವಂಥ ಸ್ಥಿತಿ ಇತ್ತು’ ಎಂದಿದ್ದಾರೆ.
ಇಂಡಿಯಾ ನಾಯಕರು ಹಿಂದೂಗಳ ಶಕ್ತಿಯನ್ನು ನಾಶ ಮಾಡುತ್ತೇವೆ ಎನ್ನುತ್ತಾರೆ. ಜೂ.4ರ ಬಳಿಕ ನಾವು ಶಕ್ತಿಯನ್ನು ಮಹಾಶಕ್ತಿಯನ್ನಾಗಿ ಪರಿವರ್ತಿ ಸುತ್ತೇವೆ ಎಂದು ಮಹಿಳೆಯರಿಗೆ ಪಿಎಂ ಭರವಸೆ ನೀಡಿದ್ದಾರೆ.
ಮುಲಾಯಂ ಹೇಳಿಕೆ ಉಲ್ಲೇಖೀಸಿ ಎಸ್‌ಪಿಗೆ ಪ್ರಧಾನಿ ಟಾಂಗ್
ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಿದರೆ ಸಮಾಜವಾದಿ ಪಕ್ಷದ ನಾಯಕರು ನಾಚಿಕೆ ಗೆಟ್ಟವರಂತೆ “ಅವರು ಹುಡುಗರು, ತಪ್ಪು ಮಾಡ್ತಾರೆ’ ಎನ್ನುವಂಥ ಹೇಳಿಕೆ ನೀಡುತ್ತಿದ್ದರು. ಆದರೀಗ ಯೋಗಿ ಸರ್ಕಾರ ಹುಡುಗರು ತಪ್ಪು ಮಾಡಿದರೆ ಮತ್ತೂಮ್ಮೆ ಅಂಥ ತಪ್ಪು ಮಾಡುವ ಯೋಚನೆಯೂ ಮಾಡದಂತೆ ಬಂದೋಬಸ್ತ್ ಮಾಡಿದೆ. ಮಹಿಳೆಯರ ಸುರಕ್ಷೆತೆಯನ್ನು ಖಾತರಿ ಪಡಿಸಿದೆ ಎಂದು ಪಿಎಂ ಹೇಳಿದ್ದಾರೆ.