ಮಸ್ಕಿ/ಸಿಂಧನೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರದು ಚುನಾವಣೆ ಬಜೆಟ್ ಆಗಿದ್ದು ಇದಕ್ಕೆ ಕಿಮ್ಮತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇವರಿಗೆ ಸಂವಿಧಾನದ ಅರಿವಿಲ್ಲ.
ಸಂವಿಧಾನದಲ್ಲಿ ಕಿಮ್ಮತ್ತಿಲ್ಲದ ಬಜೆಟ್ ಎಂದಾದರೂ ಇರುತ್ತದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಭಾನುವಾರ ಮಾತನಾಡಿದ ಅವರು, “ನಾನು ಸಂವಿಧಾನ ಓದಿದ್ದೇನೆ. ಜಾರಿಗೆ ತರುವ ಬಜೆಟ್ ಮಂಡಿಸಿದ್ದೇನೆ. ಇದು ಚುನಾವಣೆ ಬಜೆಟ್ ಅಲ್ಲ. ಇದನ್ನೇ ಜಾರಿಗೆ ತರುತ್ತೇವೆ. ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.
ರಾಜ್ಯದಲ್ಲಿ ಸುಸ್ಥಿರ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಆಶ್ವಾಸನೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಆದರೆ, ಬಿಜೆಪಿಯವರೇ ಬರುತ್ತಿಲ್ಲ. ಅಭಿವೃದ್ಧಿ ಬಗ್ಗೆ ಟೀಕೆ ಮಾಡುವ ಬಿಜೆಪಿ ನಾಯಕರಿಗೆ ಬಹಿರಂಗ ಚರ್ಚೆಗೆ ಬರುವ ಧಮ್ ಇಲ್ಲ. ಬಿಜೆಪಿಗೆ ಜನ ಅ ಧಿಕಾರ ನೀಡಿದಾಗ ಅವರೇನು ಮಾಡಿದ್ದಾರೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ಸಂಗತಿ ಎಂದು ಟೀಕಿಸಿದರು.
ಬಳಿಕ ಮಸ್ಕಿಯಲ್ಲಿ ಮಾತನಾಡಿ, ಮೋದಿ ವಿರುದ್ಧ ಹರಿಹಾಯ್ದರು. ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಮಂತ್ರಿ ಮೋದಿಯವರು ರಾಜ್ಯ ಸರಕಾರವನ್ನು ಭ್ರಷ್ಟ ಸರಕಾರವೆಂದು ನಿರಾಧಾರವಾಗಿ ಟೀಕೆ ಮಾಡಿದ್ದಾರೆ. ಪಕ್ಕದಲ್ಲಿ ಜೈಲಿಗೆ ಹೋಗಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯಂ ನಾಯ್ಡು ಮುಂತಾದವರನ್ನು ಕುಳ್ಳಿರಿಸಿಕೊಂಡು ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನಾನು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ ಸಿಂಧನೂರು ಕ್ಷೇತ್ರದಿಂದ ಅತಿ ಹೆಚ್ಚು ಮತಗಳನ್ನು ಪಡೆದಿದ್ದೆ. ಆ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದಕ್ಕಾಗಿ ಸಿಂಧನೂರು ಕ್ಷೇತ್ರಕ್ಕಾಗಿ ಎಷ್ಟು ಅನುದಾನ ನೀಡಿದರೂ ಕಡಿಮೆಯೇ.
– ಸಿದ್ದರಾಮಯ್ಯ, ಸಿಎಂ.