ಲಂಡನ್: ಮಾರ್ಚ್‌ನಲ್ಲಿ ಅರ್ಧದಲ್ಲೇ ನಿಂತ ಇಂಗ್ಲೆಂಡ್ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ ಜನವರಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆ್ಯಶೆ ಡಿ ಸಿಲ್ವ ಶನಿವಾರ ಇಂಥದೊಂದು ಸಾಧ್ಯತೆಯನ್ನು ತೆರೆದಿರಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಆದರೆ ಒಂದು ಅಭ್ಯಾಸ ಪಂದ್ಯ ಆಡುವಷ್ಟರಲ್ಲಿ ಕೋವಿಡ್-19 ವ್ಯಾಪಕಗೊಂಡಿತು. ಲಾಕ್‌ಡೌನ್ ಪರಿಣಾಮ ಸರಣಿ ಅರ್ಧದಲ್ಲೇ ನಿಂತಿತು. ಈ ಪ್ರವಾಸದ ವೇಳೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ 2 ಪಂದ್ಯಗಳನ್ನು ಆಡಬೇಕಿತ್ತು.
“ಈ ಸರಣಿಯನ್ನು ಪುನರ್ ಸಂಘಟಿಸಲು ನಾವು ಯೋಜನೆ ರೂಪಿಸುತ್ತಿದ್ದೇವೆ. 2021ರ ಜನವರಿಯಲ್ಲಿ ಲಂಕೆಗೆ ಬರುವುದಾಗಿ ಇಂಗ್ಲೆಂಡ್ ಈಗಾಗಲೇ ತಿಳಿಸಿದೆ. ಆದರೆ ದಿನಾಂಕವನ್ನು ಸೂಚಿಸಿಲ್ಲ. ನಾವು ಕೂಡ ಈ ಸರಣಿಯನ್ನು ಮುಂದುವರಿಸಲು ಸೂಕ್ತ ಅವಕಾಶವನ್ನು ಎದುರು ನೋಡುತ್ತಿದ್ದೇವೆ’ ಎಂದು ಆ್ಯಶೆ ಡಿ ಸಿಲ್ವ ಹೇಳಿದ್ದಾರೆ.
ಆದರೆ ಈಗಿನ ವೇಳಾಪಟ್ಟಿ ಪ್ರಕಾರ 2021ರ ಜನವರಿಯಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ಬಂದು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುವ ಕಾರ್ಯಕ್ರಮವಿದೆ. ಹೀಗಿರುವಾಗ ಅದು ಶ್ರೀಲಂಕಾ ವಿರುದ್ಧವೂ ಜನವರಿಯಲ್ಲಿ ಹೇಗೆ ಆಡಲಿದೆ ಎಂಬುದೊಂದು ಪ್ರಶ್ನೆ.