Advertisement

ಹೊಸ ವರ್ಷಕ್ಕೇ ಆರ್ಥಿಕ ವರ್ಷ ಶುರು? ಪ್ರಧಾನಿ ಮೋದಿ ಪ್ರಸ್ತಾಪ

03:45 AM Apr 24, 2017 | Team Udayavani |

ನವದೆಹಲಿ: ಏಪ್ರಿಲ್‌ನಿಂದ ಮಾರ್ಚ್‌ವರೆಗಿನ ಆರ್ಥಿಕ ವರ್ಷದ ಕಾರಣದಿಂದ ರೈತರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ಜನವರಿ 1 ರಿಂದ ಡಿಸೆಂಬರ್‌ 31ರ ವರೆಗೆ ಅನ್ವಯವಾಗುವಂತೆ ಆರ್ಥಿಕ ವರ್ಷ ರೂಪಿಸಲು ಚಿಂತನೆ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಭಾನುವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ 30 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಪಾಲ್ಗೊಂಡಿದ್ದ ನೀತಿ ಆಯೋಗದ ಮೂರನೇ ಸಭೆಯಲ್ಲಿ ಈ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರಗಳೂ ಚಿಂತನೆ ನಡೆಸಲಿ ಎಂದು ಅವರು ಇದೇ ಸಭೆಯಲ್ಲಿ ಕರೆ ನೀಡಿದ್ದಾರೆ.

ಮೊದಲಿಗೆ ಪ್ರಸಕ್ತ ವರ್ಷ ಬಜೆಟ್‌ ದಿನಾಂಕ ಬದಲಾವಣೆ ಮಾಡಿದ ಕಾರಣವನ್ನು ಹೇಳುತ್ತಾ, ಆರ್ಥಿಕ ವರ್ಷ ಬದಲಾವಣೆಯ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, ಮುಂಗಾರು ಮಳೆ ಹಾಗೂ ಸರ್ಕಾರಿ ಯೋಜನೆಗಳಿಗೆ ಇರುವ ಸಂಬಂಧವನ್ನು ಬಿಡಿಸಿಟ್ಟರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳ ಅನುದಾನಕ್ಕೆ ಮೇ ವರೆಗೂ ಒಪ್ಪಿಗೆ ಸಿಗುತ್ತಿರಲಿಲ್ಲ. ಅನುದಾನಕ್ಕೆ ಸಮ್ಮತಿ ಸಿಕ್ಕ ಬಳಿ, ಇದನ್ನು ರಾಜ್ಯಗಳಿಗೆ ಮತ್ತು ಸಚಿವಾಲಯಗಳಿಗೆ ತಲುಪಿಸಬೇಕಾಗಿತ್ತು. ಈ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಮುಂಗಾರು ಮಳೆ ಆರಂಭವಾಗಿರುತ್ತಿತ್ತು. ಆದರೆ, ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಬಜೆಟ್‌ನಲ್ಲಿನ ಯೋಜನೆಗಳ ಅನುದಾನ ರೈತರಿಗೆ ಸಿಕ್ಕಿದ್ದರೆ ಹೆಚ್ಚು ಉಪಯೋಗವಾಗುತ್ತಿತ್ತು. ಸರಿಯಾದ ಸಮಯಕ್ಕೆ ಅವರಿಗೆ ಸಿಕ್ಕಂತಾಗುತ್ತಿತ್ತು. ಹೀಗಾಗಿಯೇ ಜ.1 ರಿಂದಲೇ ಆರ್ಥಿಕ ವರ್ಷ ಶುರು ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

ಚುನಾವಣೆಯೂ ಒಟ್ಟಾಗಿ ನಡೆಯಲಿ
ಇದೇ ಸಂದರ್ಭದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಟ್ಟಾಗಿ ಚುನಾವಣೆ ನಡೆಯುವ ಕುರಿತಂತೆಯೂ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದರು. ಈ ಬಗ್ಗೆ ಎಲ್ಲ ಕಡೆಗಳಲ್ಲಿ ಚರ್ಚೆಗಳಾಗಬೇಕು. ಎರಡೂ ಚುನಾವಣೆಗಳನ್ನು ಮಾಡಿದರೆ ಆಗುವ ಲಾಭದ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದರು.

ಜು. 1 ರಿಂದಲೇ ಜಿಎಸ್‌ಟಿ ಜಾರಿಯಾಗಲಿ
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಬಗ್ಗೆ ಮಾತನಾಡಿದ ಅವರು, ಈ ಕಾಯ್ದೆ ರೂಪಿಸಲು ನೆರವಾದ ಎಲ್ಲರಿಗೂ ಧನ್ಯವಾದ ಹೇಳಿದರು. “ಭಾರತ ಒಂದು ರಾಷ್ಟ್ರ, ಒಂದು ಆಕಾಂಕ್ಷೆ, ಒಂದು ಬದ್ಧತೆ’ ನಿಯಮಕ್ಕೆ ಸಜ್ಜಾಗುತ್ತಿದೆ. ಜುಲೈ 1 ರಿಂದಲೇ ಜಿಎಸ್‌ಟಿ ಜಾರಿಯಾಗುವಂತೆ ಎಲ್ಲ ರಾಜ್ಯಗಳು ನೋಡಿಕೊಳ್ಳಿ. ಈಗಾಗಲೇ ನಾಲ್ಕೂ ಕಾಯ್ದೆಗಳು ಸಂಸತ್‌ನ ಒಪ್ಪಿಗೆ ಪಡೆದಿವೆ. ಉಳಿದಿರುವುದು ರಾಜ್ಯಗಳಲ್ಲಿ ಎಂದರು.

Advertisement

ಈ ವೇಳೆ, ರಾಜ್ಯಗಳು, ಸ್ಥಳೀಯ ಸರ್ಕಾರಗಳು, ಎನ್‌ಜಿಓಗಳಿಗೆ 2022ರ ಟಾರ್ಗೆಟ್‌ ಇಟ್ಟುಕೊಂಡು ಕೆಲಸ ಮಾಡಲು ಕರೆ ನೀಡಿದರು. ಭೀಮ್‌ ಮತ್ತು ಆಧಾರ್‌ನಂಥ ತಂತ್ರಜ್ಞಾನದ ಅಗತ್ಯತೆ ಬಗ್ಗೆ ವಿವರಿಸಿದರು. ಇ- ಮಾರ್ಕೆಟ್‌ ಅನ್ನು ಅಳವಡಿಸಿಕೊಳ್ಳುವಂತೆ ಹೇಳಿದ ಅವರು, ಇದರಿಂದ ಭ್ರಷ್ಟಾಚಾರ ತಪ್ಪಿಸಬಹುದು ಎಂದರು. ಇಲ್ಲಿ ಇಡೀ ಭಾರತವೇ ಸೇರಿದ್ದು, 2022ಕ್ಕೆ ಭಾರತಕ್ಕೆ ಸ್ವತಂತ್ರ ಬಂದು 75 ವರ್ಷವಾಗುತ್ತದೆ. ಅಷ್ಟೊತ್ತಿಗೆ ನವಭಾರತ ನಿರ್ಮಿಸೋಣ ಎಂದು ಕರೆ ನೀಡಿದರು.

150 ವರ್ಷಗಳ ಹಿಂದಿನ ಪದ್ಧತಿ
ಏಪ್ರಿಲ್‌ 1 ರಿಂದ ಮಾರ್ಚ್‌ 31ರ ವರೆಗಿನ ಆರ್ಥಿಕ ವರ್ಷ ಬ್ರಿಟಿಷರ ಕಾಲದ್ದು. 1947ಕ್ಕೂ ಮುನ್ನ, ಬ್ರಿಟಿಷರು ಭಾರತವನ್ನು ಆಳ್ವಿಕೆ ಮಾಡುತ್ತಿದ್ದ ಅವಧಿಯಲ್ಲಿ, ಅವರ ದೇಶದ ಆರ್ಥಿಕ ವರ್ಷವನ್ನು ಇಲ್ಲಿಯೂ ಅಳವಡಿಸಿದ್ದರು. ಇದನ್ನು ಬದಲಾಯಿಸುವ ಸಲುವಾಗಿ ಭಾರತ ಸರ್ಕಾರ 1984ರಲ್ಲಿ ಎಲ್‌.ಕೆ. ಝಾ ಅವರ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ಆರ್ಥಿಕ ವರ್ಷವನ್ನು ಮುಂಗಾರು ಮಳೆಗೆ ಅನುಗುಣವಾಗಿ ಜನವರಿ 1 ರಿಂದ ಡಿಸೆಂಬರ್‌ 31ರ ವರೆಗೆ ಬದಲಾಯಿಸಬಹುದು ಎಂದು ಶಿಫಾರಸು ಮಾಡಿತ್ತು. ಆದರೆ ಆಗ ಜಾರಿಯಾಗಲಿಲ್ಲ. ಈಗ ಮೋದಿ ಸರ್ಕಾರ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಶಂಕರ್‌ ಆಚಾರ್ಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಕಮಿಟಿ ಕೂಡ ಜನವರಿಯಿಂದಲೇ ಆರ್ಥಿಕ ವರ್ಷ ಶುರು ಮಾಡಬಹುದು ಎಂದು ಶಿಫಾರಸು ನೀಡಿತ್ತು. ಈ ಶಿಫಾರಸು ನೀತಿ ಆಯೋಗಕ್ಕೆ ಮತ್ತು ಸಂಸತ್‌ನ ಹಣಕಾಸು ಸ್ಥಾಯಿ ಸಮಿತಿಗೂ ಹೋಗಿತ್ತು. ಈಗಾಗಲೇ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿ ನೇತೃತ್ವದ ಹಣಕಾಸು ಸ್ಥಾಯಿ ಸಮಿತಿ ಕೂಡ ಜನವರಿಯಿಂದ ಆರ್ಥಿಕ ವರ್ಷ ಶುರು ಮಾಡಬಹುದು ಎಂಬ ಅಭಿಪ್ರಾಯ ತಿಳಿಸಿದೆ.

ಆರ್ಥಿಕ ವರ್ಷ- ಎಲ್ಲಿ, ಹೇಗೆ?
ಜ. 1 ರಿಂದ ಡಿ. 31 – 156 ದೇಶಗಳು
ಏ. 1 ರಿಂದ ಮಾ. 31 – 33 ದೇಶಗಳು
ಜು. 1 ರಿಂದ ಜೂ.30 – 20 ದೇಶಗಳು
ಅ.1 ರಿಂದ ಸೆ.30 – 12 ದೇಶಗಳು
ಆರ್ಥಿಕ ವರ್ಷದ ಬಗ್ಗೆ
1. ಇದು ಬ್ರಿಟಿಷರ ಜಾರ್ಜಿಯನ್‌ ಕ್ಯಾಲೆಂಡರ್‌ ಪ್ರಕಾರದ ಅವಧಿ
2. ಈಸ್ಟ್‌ ಇಂಡಿಯಾ ಕಂಪೆನಿ ಹಿಂದೂ ಕ್ಯಾಲೆಂಡರ್‌ ಗಣನೆಗೆ ತೆಗೆದುಕೊಂಡು ಆರ್ಥಿಕ ವರ್ಷ ರೂಪಿಸಿತ್ತು
3. ಭಾರತದಲ್ಲಿ ಏಪ್ರಿಲ್‌ನಿಂದ ಮಾರ್ಚ್‌ವರೆಗಿನ ಅವಧಿ ಶುರುವಾಗಿದ್ದು 1867ರಲ್ಲಿ
4. ಇದಕ್ಕೂ ಮುನ್ನ ಭಾರತದಲ್ಲಿದ್ದ ಆರ್ಥಿಕ ವರ್ಷ ಮೇ ನಿಂದ ಏಪ್ರಿಲ್‌ 30
5. ಆಗ ಹೆಚ್ಚಾಗಿ ತೆರಿಗೆ ಸಂಗ್ರಹವಾಗುತ್ತಿದ್ದುದು ಕೃಷಿಯಿಂದಲೇ.
6. 1984 ರಲ್ಲಿ ಝಾ ಸಮಿತಿ ಬದಲಾವಣೆಗೆ ಸೂಚಿಸಿದ್ದರೂ ಭಾರತ ನಿರ್ಧರಿಸಲಿಲ್ಲ
7. ಇದಕ್ಕೆ ಕಾರಣ ಜನವರಿಗೆ ಬದಲಾಯಿಸಿದರೂ ಆಗುವ ಲಾಭ ತೀರಾ ಅತ್ಯಲ್ಪ
8. ತೆರಿಗೆ ಕಾನೂನುಗಳಲ್ಲೇ ಬದಲಾವಣೆ ಮಾಡಬೇಕಾದ ಅನಿವಾರ್ಯತೆ
9. ಭಾರತದಲ್ಲಿ ಬಜೆಟ್‌ ಶುರುವಾಗಿದ್ದು 1860ರ ಏ.7 ರಂದು.

Advertisement

Udayavani is now on Telegram. Click here to join our channel and stay updated with the latest news.

Next