ನಟಿ ರಮ್ಯಾ ಅವರ ಲೈಫ್ ಕುರಿತು ಸಿನಿಮಾ ಬರುತ್ತಿದೆಯಾ? ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣ, “ಧ್ವಜ’ ಚಿತ್ರ. ಹೌದು, ಈ ಚಿತ್ರ ಒಂದು ಕುತೂಹಲಕ್ಕೆ ಕಾರಣವಾಗಿರುವುದಂತೂ ನಿಜ. ಅಷ್ಟಕ್ಕೂ ರಮ್ಯಾ ಅವರಿಗೆ ಸಂಬಂಧಿಸಿದ ವಿಷಯ ಇಲ್ಲೇನಿದೆ? ಇದು ಸಹಜವಾಗಿಯೇ ಮೂಡುವ ಪ್ರಶ್ನೆ. ಅದಕ್ಕೆ ಸ್ಪಷ್ಟ ಉತ್ತರ ಪ್ರಿಯಾಮಣಿ. ನಿಜ, ಪ್ರಿಯಾಮಣಿ ಅವರು “ಧ್ವಜ’ ಚಿತ್ರದಲ್ಲಿ ರಾಜಕಾರಣಿಯಾಗಿ ನಟಿಸುತ್ತಿದ್ದಾರೆ.
ಅಷ್ಟೇ ಅಲ್ಲ, ಅವರಿಲ್ಲಿ ರಮ್ಯಾ ಎಂಬ ಪಾತ್ರದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಇದೇ ಕೆಲ ಪ್ರಶ್ನೆಗಳಿಗೆ ಮೂಲ ಕಾರಣ. ಹಾಗಾದರೆ, “ಧ್ವಜ’ ಚಿತ್ರ ರಮ್ಯಾ ಲೈಫ್ಗೆ ಸಂಬಂಧಿಸಿದ ಚಿತ್ರವಾ? ಪ್ರಿಯಾಮಣಿ ಅವರು ರಮ್ಯಾ ಪಾತ್ರ ನಿರ್ವಹಿಸುತ್ತಿದ್ದಾರಾ? ಈ ಪ್ರಶ್ನೆಗಳನ್ನು ಸಾರಸಗಟಾಗಿ ತಿರಸ್ಕರಿಸುವ ಪ್ರಿಯಾಮಣಿ, “ಇದು ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಆಗಿದ್ದರೂ, ಇಲ್ಲಿ ರಮ್ಯಾ ಅವರ ಕುರಿತ ಕಥೆ ಇಲ್ಲ.
ಅವರ ಪಾತ್ರವೂ ಇಲ್ಲಿಲ್ಲ. ಅವರ ರಾಜಕೀಯ ವಿಷಯಕ್ಕೂ, ಅವರ ರಿಯಲ್ ಲೈಫ್ಗೂ ಯಾವುದೇ ಸಂಬಂಧವಿಲ್ಲ. ಹಾಗಂತ, ರಮ್ಯಾ ಅವರ ಸ್ಫೂರ್ತಿಯಿಂದ ಹುಟ್ಟಿಕೊಂಡ “ಧ್ವಜ’ವೂ ಅಲ್ಲ. ಮೂಲತಃ ಇದು ತಮಿಳಿನ “ಕೋಡಿ’ ಚಿತ್ರದ ರಿಮೇಕ್. ತಮಿಳಿನ “ಕೋಡಿ’ ಚಿತ್ರದಲ್ಲಿ ತ್ರಿಷಾ ಮತ್ತು ಧನುಷ್ ಅಭಿನಯಿಸಿದ್ದರು. ಇಲ್ಲಿ ನಾನು ಮತ್ತು ರವಿ ಎಂಬ ಹೊಸ ಪ್ರತಿಭೆ ಕಾಣಿಸಿಕೊಂಡಿದ್ದೇವೆ.
ಒಂದಂತೂ ಸ್ಪಷ್ಟ. ರಮ್ಯಾ ಅವರಿಗೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ರಾಜಕಾರಣಿಯಾಗಿ ನಟಿಸುತ್ತಿದ್ದೇನೆ. ಹೆಸರು ರಮ್ಯಾ ಅಂತಿದೆ ಅಷ್ಟೇ. ಅದೆಲ್ಲಾ ಕಾಕತಾಳೀಯ. ಅದು ಬಿಟ್ಟರೆ ಬೇರೇನೂ ಇಲ್ಲ. ರಾಜಕೀಯಕ್ಕೆ ಸಂಬಂಧಿಸಿದ ವಿಷಯ ಇಲ್ಲಿರುವುದರಿಂದ, ಆ ಪಾತ್ರಕ್ಕೆ ನಿರ್ದೇಶಕ ಅಶೋಕ್ ಕಶ್ಯಪ್ ಅವರು ರಮ್ಯಾ ಎಂಬ ಹೆಸರು ಕ್ಯಾಚಿ ಆಗಿರುತ್ತೆ ಅಂತ ಇಟ್ಟಿದ್ದಾರಷ್ಟೇ.
ಅದು ಬಿಟ್ಟರೆ, ಬೇರೆ ಯಾವ ಅರ್ಥ ಕಲ್ಪಿಸಿಕೊಳ್ಳಬೇಕಿಲ್ಲ. ಯಾರಿಗೋ ಅವಮಾನವಾಗಲಿ, ಅಥವಾ ಹೆಸರಿಟ್ಟುಕೊಂಡು ಪಬ್ಲಿಸಿಟಿ ತೆಗೆದುಕೊಳ್ಳುವ ಉದ್ದೇಶವಿಲ್ಲ. ಇಷ್ಟರಲ್ಲೇ ಚಿತ್ರ ತೆರೆಗೆ ಬರಲಿದೆ. ಆಗ ಎಲ್ಲರಿಗೂ ಅದರೊಳಗಿನ ತಿರುಳು ತಿಳಿಯಲಿದೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಪ್ರಿಯಾಮಣಿ.