Advertisement

ರೈತರ ಆದಾಯದುಪ್ಪಟ್ಟು ಆಗಲಿದೆಯೇ?

10:03 AM Feb 02, 2018 | Team Udayavani |

ರೈತರ ಆದಾಯ ದುಪ್ಪಟ್ಟುಗೊಳಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ರೈತರ ಉತ್ಪಾದನಾ ವೆಚ್ಚದ ಒಂದೂವರೆಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಸರ್ಕಾರದ ಈ ಕ್ರಮದಿಂದ ವಾಸ್ತವವಾಗಿ ರೈತರ ಆದಾಯ ದುಪ್ಪಟ್ಟು ಆಗಲಿದೆಯೇ? 
ಉತ್ತರ: ಸಾಧ್ಯವಿಲ್ಲ. 

Advertisement

ಯಾಕೆಂದರೆ, ಬಜೆಟ್‌ನಲ್ಲಿ ಉಲ್ಲೇಖೀಸಿರುವುದು ಉತ್ಪಾದನಾ ವೆಚ್ಚದ ಬಗ್ಗೆ ಮಾತ್ರ. ಆದರೆ, ಸಮಗ್ರ ವೆಚ್ಚದ ಪ್ರಸ್ತಾಪ ಇಲ್ಲ. ಕೃಷಿ
ಉತ್ಪಾದನೆಗೆ ಸ್ವಂತ ಭೂಮಿಗೆ ಗೇಣಿ, ಸ್ವಂತ ಬಂಡವಾಳದ ಮೇಲಿನ ಬಡ್ಡಿ, ಮನೆ ಆಳಿನ ಕೂಲಿ ಸೇರಿದಂತೆ ಹಲವು ವೆಚ್ಚಗಳು ಸರ್ಕಾರದ “ಉತ್ಪಾದನೆ ವೆಚ್ಚ’ದಲ್ಲಿ ಬರುವುದಿಲ್ಲ. ಉದಾಹರಣೆಗೆ ಹಿಂಗಾರು ಬೆಳೆ ಕಡಲೆಗೆ ಕ್ವಿಂಟಲ್‌ಗೆ ಕೇಂದ್ರ ಸರ್ಕಾರ ಈ ಬಾರಿ 4,400 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಆದರೆ, ರಾಜ್ಯದಲ್ಲಿ ಉತ್ಪಾದನಾ ವೆಚ್ಚ 4,572 ರೂ. ಇದೆ. ಇನ್ನು ಸಮಗ್ರ ವೆಚ್ಚ ಕ್ವಿಂಟಲ್‌ಗೆ 6,724 ರೂ. ಆಗುತ್ತದೆ. ಈ ನಿಟ್ಟಿನಲ್ಲಿ ಇದೊಂದು ಕಣ್ಣೊರೆಸುವ ತಂತ್ರ. ಹಾಗೊಂದು ವೇಳೆ ಸಮಗ್ರ ವೆಚ್ಚವನ್ನು ಒಳಗೊಂಡಿದ್ದರೆ, ಇದರ ಉದ್ದೇಶ ಸಾಕಾರಗೊಳ್ಳುವ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಎಂದು ಹೇಳಬಹುದು. 

ಆರ್ಥಿಕ ಸಮೀಕ್ಷೆ ಪ್ರಕಾರ ಹವಾಮಾನ ಬದಲಾವಣೆಯು ದೇಶದ ಕೃಷಿ ಮೇಲೆ ಸಾಕಷ್ಟು ಪರಿಣಾಮ ಬೀರಲಿದ್ದು, ಇದರಿಂದ ರೈತರ ಆದಾಯವು ಶೇ. 20ರಿಂದ 30ರಷ್ಟು ಕಡಿಮೆ ಆಗಲಿದೆ. ರೈತರ ಆತ್ಮಹತ್ಯೆ, ಸಾಲ ಮತ್ತಿತರ ಗಂಭೀರ ಸಮಸ್ಯೆಗಳ ಮೇಲೆ ಬಜೆಟ್‌ ಬೆಳಕು ಚೆಲ್ಲಿದಂತೆ ಕಾಣುತ್ತಿಲ್ಲ. 

22 ಸಾವಿರ ಗ್ರಾಮೀಣ ಹಾಟ್ಸ್‌ ಅಭಿವೃದ್ಧಿ ಹಾಗೂ ಗ್ರಾಮೀಣ ಕೃಷಿ ಮಾರುಕಟ್ಟೆ (ಗ್ರಾಮ್ಸ್‌)ಗಳನ್ನು ಮೇಲ್ದರ್ಜೆಗೆ, “ಆಪರೇಷನ್‌ 
ಗ್ರೀನ್ಸ್‌’ ಅಡಿ 500 ಕೋಟಿ ರೂ., ಆಹಾರ ಸಂಸ್ಕರಣೆಗೆ 1,400 ಕೋಟಿ ರೂ. ನೀಡಿರುವುದು ಸೇರಿದಂತೆ ಹಲವು ಮೂಲಸೌಕರ್ಯ
ಅಭಿವೃದ್ಧಿ ಒತ್ತು ಈ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಅಲ್ಲದೆ, ರೈತ ಉತ್ಪಾದಕರ ಸಂಘ
(ಎಫ್ಪಿಒ)ಗಳ ಉತ್ತೇಜನ, ಸಾವಯವ ಉತ್ಪಾದನೆಯಲ್ಲಿ ಮಹಿಳಾ ಸ್ವ-ಸಹಾಯ ಸಂಘಟನೆಗಳ ಸಹಭಾಗಿತ್ವದಂತಹ ಅಂಶಗಳು ಕೃಷಿಯನ್ನು ಉದ್ಯಮದ ರೀತಿಯಲ್ಲಿ ಬೆಳೆಸಲು ಪೂರಕ ಕ್ರಮಗಳಾಗಿವೆ. ಆದರೆ, ಈ ಯೋಜನೆಗಳ ಫ‌ಲಾನುಭವಿಗಳ ಸಂಖ್ಯೆ ಅತ್ಯಲ್ಪವಾಗಿದೆ. ನೂರಾರು ಲಕ್ಷ ಹೆಕ್ಟೇರ್‌ನಲ್ಲಿ ಸಾವಯವ ಪ್ರಮಾಣ ತುಂಬಾ ಕಡಿಮೆ. ದೇಶದಲ್ಲಿ ಇರುವ ಎಫ್ಪಿಒಗಳ ಸಂಖ್ಯೆ ಕೂಡ ವಿರಳ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ರಾಷ್ಟ್ರೀಕರಣಗೊಳಿಸುವ ಅವಶ್ಯಕತೆ ಇತ್ತು. ಉದಾಹರಣೆಗೆ ಹಾಲು ಉತ್ಪಾದಕರ ಮಂಡಳಿ ಇದೆ. ಯಾವೊಬ್ಬ ರೈತರೂ ಏಕಾಂಗಿಯಾಗಿ ಮಾರುಕಟ್ಟೆ ಪ್ರವೇಶಿಸುವಂತಾಗಬಾರದು. ಆಗ, ರೈತರು ಮೋಸ
ಹೋಗುವುದು ತಪ್ಪಲಿದೆ. 

ಡಾ.ಪ್ರಕಾಶ್‌ ಕಮ್ಮರಡಿ ಅಧ್ಯಕ್ಷರು, ಕರ್ನಾಟಕ ಕೃಷಿ ಬೆಲೆ ಆಯೋಗ

Advertisement
Advertisement

Udayavani is now on Telegram. Click here to join our channel and stay updated with the latest news.

Next