ದೊಡ್ಡಬಳ್ಳಾಪುರ: ಕಾರ್ಮಿಕರಿಗಾಗಿ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ 100 ಹಾಸಿಗೆಗಳ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಇನ್ನು ಉದ್ಘಾಟನಾ ಭಾಗ್ಯ ಕಾಣದೇ ಕಾರ್ಮಿಕರ ಪಾಲಿಗೆ ಮರೀಚಿಕೆಯಾಗಿದೆ. ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ನಾಲ್ಕು ಹಂತಗಳಲ್ಲಿ ವಿಸ್ತರಣೆಯಾಗಿದೆ.
ವಿದೇಶಿ ಕಂಪನಿಗಳು ಸೇರಿದಂತೆ ಹತ್ತಾರು ಬಗೆಯ ಕೈಗಾರಿಕೆ ಇಲ್ಲಿ ಸ್ಥಾಪನೆಯಾಗಿದ್ದು, ಇನ್ನು ಹಲವಾರು ಕೈಗಾರಿಕೆ ಸ್ಥಾಪಿಸಲು ಭೂಸ್ವಾಧೀನ ನಡೆಯುತ್ತಲೇ ಇದೆ. ಇಲ್ಲಿನ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ ಸೇರಿದಂತೆ ಹಲವಾರು ಬೃಹತ್ ಕೈಗಾರಿಕೆಗಳಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚಿನ ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೊಸ ಕೈಗಾರಿಕೆಗಳಿಂದ ಸಾವಿರಾರು ಕಾರ್ಮಿಕರು ಇಲ್ಲಿ ನೆಲೆಯೂರಿ ವಂತಾಗಿದ್ದು, ಕಾರ್ಮಿಕರ ಆರೋಗ್ಯಕ್ಕಾಗಿ ಸೂಕ್ತ ಇಎಸ್‌ಐ ಆಸ್ಪತ್ರೆ ಇಲ್ಲವಾಗಿದೆ.
ಇಲ್ಲಿ ಸೌಲಭ್ಯಗಳಿಲ್ಲ: ಪ್ರಸ್ತುತ ನಗರದ ಡಿ.ಕ್ರಾಸ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಸೌಲಭ್ಯಗಳಿಲ್ಲ. ಸರ್ಕಾರ ಕೈಗಾರಿಕೆಗಳ ಸ್ಥಾಪನೆ, ವಿಸ್ತರಣೆಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಕೈಗಾರಿಕೆಗಳಲ್ಲಿ ರಾತ್ರಿ-ಹಗಲೆನ್ನದೆ ದುಡಿಯುವ ಕಾರ್ಮಿಕರ ಆರೋಗ್ಯದ ಕಡೆಗೆ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಕಾರ್ಮಿಕರು ಅನಿವಾರ್ಯವಾಗಿ ಬೆಂಗಳೂರಿನ ರಾಜಾಜಿ ನಗರದಲ್ಲಿನ ಇಎಸ್‌ಐ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿದೆ.
ಉದ್ಘಾಟನೆಯಲ್ಲಿ ರಾಜಕೀಯ ಬೇಡ: ಕೇಂದ್ರ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕರ ಸಚಿವರಾಗಿದ್ದಾಗ ಇಎಸ್‌ಐ ಆಸ್ಪತ್ರೆಯ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಂಡು, 2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆಯಾಗಿತ್ತು. ಇಎಸ್‌ಐ ಆಸ್ಪತ್ರೆ ಕಟ್ಟಡ ಕಾಮಗಾರಿ ಹಲವಾರು ಕಾನೂನು ತೊಡಕುಗಳಿಂದ ಕುಂಟುತ್ತಾ ಸಾಗಿದ್ದು, ಈಗ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಕಾರ್ಮಿಕರ ಹಲವಾರು ವರ್ಷಗಳ ಹೋರಾಟದ ಫಲವಾಗಿ ಇಎಸ್‌ಐ ಆಸ್ಪತ್ರೆ ಇಲ್ಲಿಗೆ ಬಂದಿದೆ. ಆದರೆ, ಚುನಾವಣೆ ಹತ್ತಿರ ಬಂದಾಗ ಉದ್ಘಾಟನೆ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ಕೆಲ ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿಸಿಕೊಂಡು ನಿಧಾನಗತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.
ಆಸ್ಪತ್ರೆ ಉದ್ಘಾಟನೆಗೆ ಆಗ್ರಹ: ಕಳೆದ 10 ದಿನದ ಹಿಂದೆಯಷ್ಟೇ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಜನಸ್ಪಂದನ ಕಾರ್ಯಕ್ರಮ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲೆಗೆ ಅಥವಾ ತಾಲೂಕಿಗೂ ಸಹ ಯಾವುದೇ ಕೊಡುಗೆ ನೀಡುವುದಿರಲಿ, ಕನಿಷ್ಠ ಘೋಷಣೆಯನ್ನು ಮಾಡಿಲ್ಲ. ಕಾರ್ಮಿಕರ ಆರೋಗ್ಯ ಸೇವೆಗೆ ಸಿದ್ಧವಾಗಿದ್ದ ಇಎಸ್‌ಐ ಆಸ್ಪತ್ರೆಯನ್ನಾದರೂ ಈ ಸಮಯದಲ್ಲಿ ಉದ್ಘಾಟನೆ ಮಾಡಿದ್ದರೆ ಅರ್ಥಪೂರ್ಣವಾಗುತ್ತಿತ್ತು ಎನ್ನುತ್ತಾರೆ ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಎ.ವೆಂಕಟೇಶ್.
ಪ್ರತಿಭಟನೆಯ ಎಚ್ಚರಿಕೆ
ಇಷ್ಟೊಂದು ದೊಡ್ಡ ಸಂಖ್ಯೆಯ ಕಾರ್ಮಿಕರು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಸೂಕ್ತ ಆಸ್ಪತ್ರೆ ಸೌಲಭ್ಯ ಇಲ್ಲದಾಗಿದೆ. ರಾಜಕೀಯದ ಹಿನ್ನಲೆ, ಏನೇ ಇದ್ದರೂ ಕಾರ್ಮಿಕರ ಆರೋಗ್ಯದ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಇಎಸ್‌ಐ ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸಬೇಕು. ಇದೇ ರೀತಿಯ ವಿಳಂಬ ಧೋರಣೆ ಮಾಡಿದರೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಮಿಕ ಮುಖಂಡರು ಎಚ್ಚರಿಸಿದ್ದಾರೆ.
100 ಹಾಸಿಗೆಗಳ ಆಸ್ಪತ್ರೆ
9 ವರ್ಷದ ಹಿಂದೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಅರೆಹಳ್ಳಿಗುಡ್ಡದಹಳ್ಳಿ ಸಮೀಪ ಶಂಕುಸ್ಥಾಪನೆಯಾದ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಕಾಮಗಾರಿ ಈಗಷ್ಟೇ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಆದರೆ, ಉದ್ಘಾಟನೆ ಭಾಗ್ಯ ಕಾಣದೆ ಕಾರ್ಮಿಕರು ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಹ ಸ್ಥಿತಿ ಉಂಟಾಗಿದೆ ಎಂದು ಕಾರ್ಮಿಕ ಮುಖಂಡರಾದ ಮಣೀಶ್ ಶರ್ಮ, ಮುನೇಗೌಡ ದೂರಿದ್ದಾರೆ.