Advertisement

ಬಲವಂತದ ಮತಾಂತರ ತಡೆಗೆ ಕಠಿಣ ಕ್ರಮ: ಸುಪ್ರೀಂಗೆ ಕೇಂದ್ರ ಸರ್ಕಾರದ ಅಫಿಡವಿಟ್‌

08:56 PM Nov 28, 2022 | Team Udayavani |

ನವದೆಹಲಿ: “ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎನ್ನುವುದು ಇತರೆ ಜನರನ್ನು ಬಲವಂತವಾಗಿ ಮತಾಂತರ ಮಾಡುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ’.

Advertisement

ಬಲವಂತದ ಮತಾಂತರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಈ ರೀತಿ ಹೇಳಿದೆ. ಅಲ್ಲದೇ, ಕಾನೂನುಬಾಹಿರ ಮತಾಂತರವನ್ನು ತಡೆಯುವಂಥ ಕಾನೂನುಗಳಿಗೂ ಬೆಂಬಲ ವ್ಯಕ್ತಪಡಿಸಿರುವ ಸರ್ಕಾರ, “ಮಹಿಳೆಯರು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಸೇರಿದಂತೆ ದುರ್ಬಲ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಇಂಥ ಕಾನೂನುಗಳ ಅಗತ್ಯವಿದೆ’ ಎಂದೂ ಹೇಳಿದೆ.

ಒತ್ತಾಯಪೂರ್ವಕ ಹಾಗೂ ಆಮಿಷದ ಮತಾಂತರಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬಿಜೆಪಿ ನಾಯಕ, ವಕೀಲ ಅಶ್ವಿ‌ನಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಎಂ.ಆರ್‌.ಶಾ ಮತ್ತು ನ್ಯಾ.ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಸೂಕ್ತ ಕ್ರಮ ಕೈಗೊಳ್ಳುತ್ತೇವೆ:
ಅದರಂತೆ, ಸೋಮವಾರ ಅಫಿಡವಿಟ್‌ ಸಲ್ಲಿಸಿದ ಸರ್ಕಾರ, “ಬಲವಂತದ ಮತಾಂತರದ ಆಳ ಮತ್ತು ಗಂಭೀರತೆಯನ್ನು ನಾವು ಅರಿತಿದ್ದು, ಈ ನಿಟ್ಟಿನಲ್ಲಿ ಸೂಕ್ತ ಹೆಜ್ಜೆಯನ್ನು ಇಡಲಿದ್ದೇವೆ’ ಎಂದು ಹೇಳಿದೆ. ಜತೆಗೆ, ಇದು ರಾಜ್ಯಗಳಿಗೆ ಸಂಬಂಧಿಸಿದ ವಿಚಾರವಾಗಿದ್ದು, ಕರ್ನಾಟಕ, ಗುಜರಾತ್‌, ಹರ್ಯಾಣ ಸೇರಿದಂತೆ 9 ರಾಜ್ಯಗಳು ಕಳೆದ ಕೆಲವು ವರ್ಷಗಳಿಂದೀಚೆಗೆ ಮತಾಂತರ ತಡೆಗೆ ಹಲವು ಕ್ರಮಗಳನ್ನು ಕೈಗೊಂಡಿವೆ ಎಂದೂ ತಿಳಿಸಿದೆ.

ಇನ್ನು, ಅರ್ಜಿಯನ್ನು ವಿರೋಧಿಸಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಂಜಯ್‌ ಹೆಗ್ಡೆ, “ಈ ಅರ್ಜಿಯನ್ನು ಈ ಹಿಂದೆಯೇ ಮೂವರು ನ್ಯಾಯಮೂರ್ತಿಗಳ ಪೀಠವು ವಜಾ ಮಾಡಿತ್ತು. ಈಗಲೂ ಇದರ ವಿಚಾರಣೆಯ ಅಗತ್ಯವಿಲ್ಲ’ ಎಂದು ಹೇಳಿದರು. ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾ.ಶಾ, “ಹಾಗಾದರೆ ನೀವು ಬಲವಂತರ ಮತಾಂತರವನ್ನು ಬೆಂಬಲಿಸುತ್ತಿದ್ದೀರಾ’ ಎಂದು ಪ್ರಶ್ನಿಸಿದರು.

Advertisement

ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿ
ವಿಚಾರಣೆ ವೇಳೆ, ಇದೊಂದು “ಮಹತ್ವದ ವಿಚಾರ’ ಎಂಬುದನ್ನು ಪುನರುಚ್ಚರಿಸಿರುವ ಸರ್ವೋಚ್ಚ ನ್ಯಾಯಾಲಯ, ಮತಾಂತರಕ್ಕೆ ಬ್ರೇಕ್‌ ಹಾಕಲು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಪ್ರತಿಯೊಂದು ರಾಜ್ಯಕ್ಕೂ ಮಾಹಿತಿ ಕೋರಿ ನೋಟಿಸ್‌ ಜಾರಿ ಮಾಡುವುದರಿಂದ, ವಿಚಾರಣೆ ಮತ್ತಷ್ಟು ವಿಳಂಬವಾಗುತ್ತದೆ. ಅದರ ಬದಲಾಗಿ, ಕೇಂದ್ರವೇ ಎಲ್ಲ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿ ಸಲ್ಲಿಸಲಿ ಎಂದು ಹೇಳಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಡಿ.5ಕ್ಕೆ ನಿಗದಿಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next