ಹೊಸದಿಲ್ಲಿ: ಕೋವಿಡ್ ಲಸಿಕೆಯ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರಂಭದಿಂದಲೂ ವಿರೋಧ ಮಾಡುತ್ತಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇನ್ನು ಲಸಿಕಾ ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೇಂದ್ರದಿಂದಲೇ ಉಚಿತ ಲಸಿಕೆ ನೀಡಲಾಗುತ್ತದೆ ಎಂದಿದ್ದರು.
ಈ ಬೆಳವಣಿಗೆಯ ಬಳಿಕ ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, ಜನರ ಆಕ್ರೋಶಕ್ಕೆ ಮಣಿದ ಸರ್ಕಾರ ಜನರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿದೆ. ಆಕ್ರೋಶದ ಕಾರಣದಿಂದ ರಾಜಕೀಯ ಮಾಡುವುದನ್ನು ಬಿಟ್ಟು ಲಸಿಕಾರಣದ ಮೇಲೆ ನಿಯಂತ್ರಣ ಹೊಂದಲು ನಿರ್ಧರಿಸಿದೆ ಎಂದಿದ್ದಾರೆ.
ನಾವು ಬಿಜೆಪಿಯ ಲಸಿಕೆಗೆ ವಿರೋಧ ಮಾಡುತ್ತೇವೆ. ಆದರೆ ಭಾರತ ಸರ್ಕಾರದ ಲಸಿಕೆಗೆ ಸ್ವಾಗತಿಸುತ್ತೇವೆ. ನಾವು ಲಸಿಕೆ ಪಡೆಯುತ್ತೇವೆ. ಜನರನ್ನೂ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸುತ್ತೇವೆ ಎಂದು ಅಖಿಲೇಶ್ ಹೇಳಿದ್ದಾರೆ.
ಇನ್ನು ಮುಂದೆ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ನೀಡಲಿದೆ. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಗಳನ್ನು ಕೇಂದ್ರ ಈಡೇರಿಸಲಿದೆ. ಮುಂದಿನ ಎರಡು ವಾರಗಳ ನಂತರ ಲಸಿಕೆಯನ್ನು ನೀಡಲಿದೆ. ರಾಜ್ಯಗಳಿಗೆ ಹಸ್ತಾಂತರಿಸಿದ ಶೇಕಡಾ 25 ರಷ್ಟು ವ್ಯಾಕ್ಸಿನೇಷನ್ ಸಂಗ್ರಹವನ್ನು ಮುಂದೆ ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ ಎಂದು ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಸೋಮವಾರ ಹೇಳಿದ್ದರು.
18 ರಿಂದ 44 ವರ್ಷ ವಯಸ್ಸಿನ ಪ್ರತಿಯೊಬ್ಬರಿಗೂ ಕೋವಿಡ್ -19 ಲಸಿಕೆಗಳನ್ನು ಖರೀದಿಸಲು ಮತ್ತು ಅವುಗಳನ್ನು ರಾಜ್ಯಗಳಿಗೆ ಉಚಿತವಾಗಿ ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು .