Advertisement

Mysore:ಕಲ್ಲಡ್ಕ ಪ್ರಭಾಕರ ಭಟ್ ಮೇಲಿಂದ ಇಳಿದು ಬಂದಿಲ್ಲ,ವಿರುದ್ಧ ಕ್ರಮ ಖಂಡಿತ: ಸಚಿವ ತಂಗಡಗಿ

06:19 PM Jan 02, 2024 | Team Udayavani |

ಮೈಸೂರು: ಕಲ್ಲಡ್ಕ ಪ್ರಭಾಕರ ಭಟ್ ಮೇಲಿಂದ ಇಳಿದು ಬಂದಿಲ್ಲ, ಅವರ ಮೇಲೂ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

Advertisement

ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಅವರನ್ನು ಬಂಧಿಸಲು ಸರ್ಕಾರ ವಿಫಲವಾಯಿತೇ ಎಂಬ ಮಾಧ್ಯಮಗಳ ಪ್ರಶ್ನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾರನ್ನೂ ಪೋಷಣೆ, ರಕ್ಷಣೆ ಮಾಡುವ ಮಾತೇ ಇಲ್ಲ ಎಂದರು.

ಡಿಕೆಶಿ ವಿರುದ್ಧ ಬಿಜೆಪಿ ಹುನ್ನಾರ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದು ನೂರಕ್ಕೆ ನೂರು ಸತ್ಯ. ಸಿಬಿಐ, ಇಡಿ ಸಂಸ್ಥೆಗಳನ್ನು ಬಿಜೆಪಿಯವರು ಸ್ವಂತ ಆಸ್ತಿಯಾಗಿ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಕಾನೂನಾತ್ಮಕವಾಗಿ ವಾಪಸ್ ಪಡೆದಿದ್ದರೂ, ಮತ್ತೊಮ್ಮೆ ಎದುರಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಮೂಲಕ ಬಿಜೆಪಿ ಪಕ್ಷದ ವಿರುದ್ಧ ಟೀಕೆ ಮಾಡುವವರ ಬಗ್ಗೆ, ಪ್ರಭಾವಿಗಳ ಬಗ್ಗೆ ದ್ವೇಷದ ರಾಜಕೀಯ ಮಾಡಲಾಗುತ್ತಿದೆ. ಅಂತಹವರನ್ನು ಟಾರ್ಗೆಟ್ ಮಾಡಿ ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯವರ ಮೇಲೆ ಯಾಕೆ ಇಡಿ, ಸಿಬಿಐ ಕೇಸ್ ಗಳನ್ನು ಹಾಕುತ್ತಿಲ್ಲ? ಭ್ರಷ್ಟಾಚಾರ, ಸುಳ್ಳು ಹೇಳುವುದೆ ಬಿಜೆಪಿ ಅಜೆಂಡಾ ಆಗಿದೆ. ಜನರ ಧಾರ್ಮಿಕ ಭಾವನೆಗಳ ಜೊತೆ ಆಟ ಆಡುತ್ತಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಜನರ ಮೇಲೆ ಹೇರಿ ಜನರನ್ನು ದಿಕ್ಕು ತಪ್ಪಿಸುವುದೇ ಬಿಜೆಪಿ ಅಜೆಂಡಾ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಚಿಂತನೆ ಇಲ್ಲ ಎಂದು ಟೀಕಿಸಿದರು.

ಸರ್ಕಾರಿ ಶಾಲೆ‌ ಮುಚ್ಚುವುದಿಲ್ಲ: ರಾಜ್ಯದ ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕೇರಳ ಗಡಿ ಭಾಗಕ್ಕೆ ಭೇಟಿ ಕೊಟ್ಟು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಸೂಕ್ತ ಕ್ರಮ ವಹಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.

Advertisement

ರಂಗಾಯಣದ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ಸದ್ಯಕ್ಕೆ ನಾನೇ ಅದರ ನಿರ್ದೇಶಕ, ಅಧ್ಯಕ್ಷ ಎಲ್ಲವೂ ಆಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾನೂನು ವಿರುದ್ಧ ಹೋಗಬಾರದು: ಕನ್ನಡಪರ ಹೋರಾಟಗಾರರ ಬಂಧನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕನ್ನಡ, ನಾಡು, ನುಡಿ ಜಲದ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ. ಆದರೆ, ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಸರ್ಕಾರ ಈಗಾಗಲೇ 60:40ರ ಅನುಪಾತದಡಿಯಲ್ಲಿ ಕನ್ನಡ ಬಳಕೆಗೆ ನಿರ್ದೇಶನ‌ ನೀಡಿದೆ. ಅದನ್ನು ತಪ್ಪದೇ ಪಾಲನೆ ಮಾಡಬೇಕು. ಕಾನೂನಿನ ಮುಂದೆ ನಾವು, ನೀವು ಎಲ್ಲರೂ ಒಂದೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next