ಹೊಸದಿಲ್ಲಿ: 2019ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಇನ್ನೂ 2 ವರ್ಷಗಳಿದ್ದರೂ ಎಲ್ಲರೂ ಈಗಿನಿಂದಲೇ ತಂಡ ಕಟ್ಟುವ ತಯಾರಿಯಲ್ಲಿ ತೊಡಗಿದ್ದಾರೆ. ತಂಡದ ಸ್ವರೂಪ ಹೇಗಿರಬೇಕು, ಯಾವ ಆಟಗಾರರನ್ನು ಹೋರಾಟಕ್ಕೆ ಅಣಿಗೊಳಿಸಬೇಕು, ಹಿರಿಯ ಕ್ರಿಕೆಟಿಗರು-ನಿವೃತ್ತಿಗೆ ಸಮೀಪಿಸಿದವರು ತಂಡದಲ್ಲಿರಬೇಕೇ ಎಂಬೆಲ್ಲ ಸಂಗತಿಗಳ ಬಗ್ಗೆ ಗಂಭೀರವಾಗಿ ಚಿಂತಿಸಲು ಇದು ಸಕಾಲ.
ಭಾರತದ ಮಟ್ಟಿಗೆ ಹೇಳುವುದಾದರೆ ಸೀನಿಯರ್ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ವಿಶ್ವಕಪ್ ವೇಳೆ ತಂಡದಲ್ಲಿರಬೇಕೇ, ಬೇಡವೆಂದಾದಲ್ಲಿ ಇವರ ಬಗ್ಗೆ ಈಗಲೇ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಈ ಸ್ಥಾನದಲ್ಲಿ ಯುವ ಆಟಗಾರರನ್ನು ಸೇರಿಸಿಕೊಂಡು ಅವರನ್ನು ಈಗಲೇ ಪಳಗಿಸಿದರೆ ವಿಶ್ವಕಪ್ ವೇಳೆ ಬಲಿಷ್ಠ ತಂಡವೊಂದನ್ನು ಕಟ್ಟಬಹುದೆಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಭಾರತ “ಎ’ ತಂಡದ ಕೋಚ್ ರಾಹುಲ್ ದ್ರಾವಿಡ್ ಕೂಡ ಇತ್ತೀಚೆಗೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಹೇಳಿಕೆಯೊಂದನ್ನು ನೀಡಿದ್ದು, ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸಿŒ ಜತೆ ಚರ್ಚಿಸಿ ಸೂಕ್ತ ಸಮಯದಲ್ಲಿ ಧೋನಿ ಮತ್ತು ಯುವರಾಜ್ ಬಗ್ಗೆ ನಿರ್ಧಾರವೊಂದಕ್ಕೆ ಬರಲಾಗುವುದು ಎಂದಿದ್ದಾರೆ.
“ಯಾರು ತಂಡದ ಬಲವನ್ನು ವೃದ್ಧಿಸಬಲ್ಲರೆಂಬುದು ನಮಗೆಲ್ಲರಿಗೂ ತಿಳಿದಿದೆ. ಹಂತ ಹಂತವಾಗಿ ನಾವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಒಮ್ಮಿಂದೊಮ್ಮೆಲೇ ಬದಲಾವಣೆ ಅಸಾಧ್ಯ. ಧೋನಿ ಮತ್ತು ಯುವರಾಜ್ 2019ರ ವಿಶ್ವಕಪ್‌ಗೆ ಅನಿವಾರ್ಯರೇ, ಅಲ್ಲವೇ ಎಂಬುದನ್ನು ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸಿŒ ಜತೆ ನಾವು ಚರ್ಚಿಸಿ ಮುಂದಿನ ಹೆಜ್ಜೆ ಇಡಲಿದ್ದೇವೆ. ಕೊನೆಯಲ್ಲಿ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಲಿದೆ…’ ಎಂದಿದ್ದಾರೆ ಪ್ರಸಾದ್.
ಭಾರತದಲ್ಲೀಗ ಸಾಕಷ್ಟು ಮಂದಿ ಯುವ ಹಾಗೂ ಪ್ರತಿಭಾನ್ವಿತ ಆಟಗಾರರರಿದ್ದಾರೆ. ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಆಗಮನದ ಬಳಿಕ ಏಕದಿನ ತಂಡದಲ್ಲಿ ಸಮತೋಲನ ಕಂಡುಬಂದಿದೆ. ಯುವರಾಜ್ ಸ್ಥಾನಕ್ಕೆ ಮನೀಷ್ ಪಾಂಡೆ ಕಾದು ಕುಳಿತಿದ್ದಾರೆ. ಧೋನಿ ಸ್ಥಾನ ತುಂಬಲು ರಿಷಬ್ ಪಂತ್ ಸಿದ್ಧರಾಗಿದ್ದಾರೆ. ಹೀಗಿರುವಾಗ ಆಯ್ಕೆ ಸಮಿತಿಯ ಮುಂದಿನ ನಿರ್ಧಾರಗಳು ಸಹಜವಾಗಿಯೇ ಕುತೂಹಲ ಮೂಡಿಸಿವೆ.