ಲಕ್ನೋ:ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸುವುದು ಪ್ರಮುಖ ಆದ್ಯತೆಯಾಗಿದ್ದು, 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಉತ್ತರಪ್ರದೇಶದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತರಪ್ರದೇಶದಲ್ಲಿ ಹೀನಾಯವಾಗಿ ಸೋಲಲು ಕಾರಣ ಏನು ಎಂಬ ಕುರಿತು ಸಿಂಧ್ಯಾ ನೇತೃತ್ವದಲ್ಲಿ ಯುಪಿಸಿಸಿ ಕೇಂದ್ರ ಕಚೇರಿಯಲ್ಲಿ ಆರೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಯ್ತು. ಬಳಿಕ ಸಿಂಧಿಯಾ ಸುದ್ದಿಗಾರರ ಜತೆ ಮಾತನಾಡಿದರು.
ಪುನರ್ ಅವಲೋಕನಾ ಸಭೆಯಲ್ಲಿ ಪಕ್ಷದ ಮುಖಂಡರು, ಅಭ್ಯರ್ಥಿಗಳ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಲಾಯಿತು. ಅಲ್ಲದೇ ಪಕ್ಷದ ಸೋಲಿನ ಕುರಿತು ಚರ್ಚೆ ನಡೆಸಲಾಯಿತು.ಉತ್ತರಪ್ರದೇಶದಲ್ಲಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕಾಗಿದೆ ಎಂದರು.
ಎರಡು ವಾರಗಳ ನಂತರ ಮತ್ತೊಂದು ಸಭೆ ನಡೆಯುವ ನಿರೀಕ್ಷೆಯಲ್ಲಿದ್ದು, ಇದರಲ್ಲಿ 12 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಅಂತಿಮಗೊಳಿಸಲು ಮುಖಂಡರ ಜತೆ ಚರ್ಚಿಸಲಾಗುವುದು ಎಂದು ಸಿಂಧಿಯಾ ತಿಳಿಸಿದರು.