Advertisement

ಎಸ್‌.ಆರ್‌. ಪಾಟೀಲ್‌ಗೆ ಸಿಗುತ್ತಾ ಅವಕಾಶ?

04:52 PM May 23, 2022 | Team Udayavani |

ಬಾಗಲಕೋಟೆ: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ನಾಯಕ, ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಟಿಕೆಟ್‌ ವಂಚಿತ ಎಸ್‌.ಆರ್‌. ಪಾಟೀಲರಿಗೆ ಅವಕಾಶ ದೊರೆಯುತ್ತಾ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

Advertisement

ಹೌದು, ವಿಧಾನಪರಿಷತ್‌ಗೆ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಒಂದು ಸ್ಥಾನಕ್ಕೆ ಮಾತ್ರ ಟಿಕೆಟ್‌ ನೀಡಲಾಗಿತ್ತು. ಆ ವೇಳೆ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದ ಎಸ್‌.ಆರ್‌. ಪಾಟೀಲ ಅವರಿಗೆ ಟಿಕೆಟ್‌ ಕೈತಪ್ಪಿತ್ತು. ಈ ವೇಳೆ ಜಿಲ್ಲೆಯ ಕಾಂಗ್ರೆಸ್‌ ನಾಯಕರ ಒಂದು ಗುಂಪು ವಿರೋಧ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಪಾಟೀಲರಿಗೆ ಟಿಕೆಟ್‌ ಕೊಡಿಸಲು ವಿಶೇಷ ಆಸಕ್ತಿ ತೋರಿಸಲಿಲ್ಲ ಎಂಬ ಅಸಮಾಧಾನ, ಎಸ್‌.ಆರ್‌. ಪಾಟೀಲ ಬೆಂಬಲಿಗರಿಂದ ಕೇಳಿ ಬಂದಿತ್ತು.

ಕಾಂಗ್ರೆಸ್‌ನಿಂದ ಮೂವರು ನಿವೃತ್ತಿ: ಆರು ವರ್ಷದ ಅವಧಿಗೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಲ್ಲಂವೀರಭದ್ರಪ್ಪ, ಜಿಲ್ಲೆಯ ಆರ್‌.ಬಿ. ತಿಮ್ಮಾಪುರ, ವೀಣಾ ಅಚ್ಚಯ್ಯ ಅವರು ಆಯ್ಕೆಯಾಗಿದ್ದರು. ಬಿಜೆಪಿಯಿಂದ ಲಕ್ಷ್ಮಣ ಸವದಿ, ಲೆಹರ್‌ಸಿಂಗ್‌ ಹಾಗೂ ಜೆಡಿಎಸ್‌ನಿಂದ ರಮೇಶಗೌಡ, ಕೆ. ನಾರಾಯಣಸ್ವಾಮಿ ಅವರಿಗೆ ಅವಕಾಶ ದೊರೆತ್ತಿತ್ತು.

ಆಗ ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಎಂಎಲ್‌ಸಿ ಸ್ಥಾನಗಳ ಹಂಚಿಕೆಯಾಗಿತ್ತು. ಇದೀಗ ಶಾಸಕರ ಸಂಖ್ಯಾಬಲ ಅದಲು-ಬದಲಾಗಿದ್ದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸದ್ಯದ ಶಾಸಕರ ಸಂಖ್ಯಾಬಲ ಗಮನಿಸಿದರೆ ಖಾಲಿಯಾದ ಏಳು ಸ್ಥಾನಗಳಲ್ಲಿ ಬಿಜೆಪಿಗೆ ನಾಲ್ಕು, ಕಾಂಗ್ರೆಸ್‌ಗೆ 2 ಹಾಗೂ ಜೆಡಿಎಸ್‌ ಗೆ ಒಂದು ಸ್ಥಾನ ದೊರೆಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಏಳು ಸ್ಥಾನಗಳಲ್ಲಿ ಬಿಜೆಪಿಗೆ 2 ಸ್ಥಾನ ಹೆಚ್ಚುವರಿಯಾಗಿ ದೊರೆಯಲಿದ್ದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ತಲಾ ಒಂದು ಸ್ಥಾನ ಮೈನಸ್‌ ಆಗಲಿದೆ.

ರೇಸ್‌ನಲ್ಲಿ ಪಾಟೀಲ ಹೆಸರು: ಕಳೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪಿದ ಬಳಿಕ ಕೊಂಚ ಅಸಮಾಧಾನಗೊಂಡಿದ್ದ ಎಸ್‌.ಆರ್‌. ಪಾಟೀಲರು, ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಮಾತನಾಡದಿದ್ದರೂ ಒಳಗೊಳಗೇ ಹಾಗೂ ತಮ್ಮ ಅತ್ಯಾಪ್ತ ಬೆಂಬಲಿಗರ ಮಧ್ಯೆ ಬೇಸರ ವ್ಯಕ್ತಪಡಿಸಿದ್ದರು.

Advertisement

ಕಾಂಗ್ರೆಸ್‌ನ ರಾಜ್ಯ ಹಾಗೂ ಕೇಂದ್ರ ನಾಯಕರ ಒಂದು ಗುಂಪು, ಮುಂದೆ ಅವಕಾಶ ದೊರೆಯಲಿದೆ ಎಂಬ ಸಮಾಧಾನದ ಮಾತು ಹೇಳಿತ್ತು ಎನ್ನಲಾಗಿದೆ. ಇದೆಲ್ಲದರ ಮಧ್ಯೆ ತಮ್ಮ ಸಾಮರ್ಥ್ಯ ತೋರಿಸಲು, ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನರಗುಂದದಿಂದ ಟ್ರ್ಯಾಕ್ಟರ್  ಯಾತ್ರೆ ಆರಂಭಿಸಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಸಂಚರಿಸಿ, ಸಮಾವೇಶ ಕೂಡ ನಡೆಸಿದ್ದರು. ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲೂ ಪಾಟೀಲರ ಟ್ಯಾಕ್ಟರ್‌ ಯಾತ್ರೆ ಸಂಚರಿಸಿತ್ತು. ಇದು ಸಿದ್ದರಾಮಯ್ಯ ಸಹಿತ ಕಾಂಗ್ರೆಸ್‌ ನ ಒಂದು ಗುಂಪು ಅಸಮಾಧಾನಗೊಂಡಿತ್ತು ಎನ್ನಲಾಗಿದೆ.

ಇದೆಲ್ಲದರ ಮಧ್ಯೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಾಟೀಲರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್‌ ಆಗಬಾರದು ಎಂಬ ಕಾರಣಕ್ಕಾಗಿ ಅವರ ಮನವೋಲಿಸುವ ಪ್ರಯತ್ನ ಪಕ್ಷದ ಹಿರಿಯರ ಒಂದು ಗುಂಪು ಮಾಡಿತ್ತು ಎಂದು ತಿಳಿದು ಬಂದಿದೆ.

ಪ್ರಸ್ತುತ ವಿಧಾನಪರಿಷತ್‌ ಚುನಾವಣೆಯಲ್ಲಿ ಎಸ್‌.ಆರ್‌. ಪಾಟೀಲರಿಗೆ ಅವಕಾಶ ಕೊಡಲೇಬೇಕು ಎಂಬ ಒತ್ತಾಯ ಒಂದೆಡೆ ಕೇಳಿ ಬಂದಿದ್ದು, ಇದಕ್ಕೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಆರ್‌.ಬಿ. ತಿಮ್ಮಾಪುರ ನಿವೃತ್ತಿಯಾಗಿದ್ದು, ಎಸ್‌.ಆರ್‌. ಪಾಟೀಲ ಅವರಿಗೆ ಅವಕಾಶ ದೊರೆಯುತ್ತಾ ಎಂಬ ಕುತೂಹಲ ಜಿಲ್ಲೆಯ ಜನರಲ್ಲಿದೆ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next