ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಪಾಳ ಮೋಕ್ಷ ಮಾಡಿದ್ದಕ್ಕಾಗಿ ಖ್ಯಾತ ಹಾಲಿವುಡ್ ನಟ ವಿಲ್ ಸ್ಮಿತ್ ಸಾರ್ವಜನಿಕವಾಗಿ ನಟ ಹಾಗೂ ನಿರೂಪಕ ಕ್ರಿಸ್ ರಾಕ್ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ.
ವಿಲ್ ಸ್ಮಿತ್ ತನ್ನ ಮೊದಲ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆಗೆ ಘಟನೆ ಬಳಿಕ ಹೋದಾಗ, ತಮ್ಮ ತಪ್ಪಿಗಾಗಿ ಅಕಾಡೆಮಿ, ನಾಮನಿರ್ದೇಶಿತರು ಮತ್ತು ಡಾಲ್ಬಿ ಥಿಯೇಟರ್‌ನಲ್ಲಿ ಕುಳಿತಿರುವ ಎಲ್ಲರಲ್ಲೂ ಕ್ಷಮೆಯಾಚಿಸಿದರು, ಆದರೆ ಅವರು ತಮ್ಮ ಕ್ಷಮೆಯಾಚನೆಯಲ್ಲಿ ಕ್ರಿಸ್ ರಾಕ್ ಅವರ ಹೆಸರನ್ನು ಹೇಳಿರಲಿಲ್ಲ.
ಘಟನೆ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಕ್ಷಮಾಪಣಾ ಪತ್ರ ಪೋಸ್ಟ್ ಮಾಡಿದ್ದು, ನನ್ನದು”ತಪ್ಪು” ಮತ್ತು “ಹದ್ದು ಮೀರಿದ್ದು” ಎಂದು ಒಪ್ಪಿಕೊಂಡಿದ್ದಾರೆ.
”ನನ್ನ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದಂತಿತ್ತು. ನನ್ನ ಬದುಕಿನಲ್ಲಿ ಜೋಕ್‌ಗಳು ಕೆಲಸದ ಒಂದು ಭಾಗವಾಗಿದೆ, ಆದರೆ ಜಾಡಾಳ ವೈದ್ಯಕೀಯ ಸ್ಥಿತಿಯ ಬಗ್ಗೆ ಮಾಡಿದ ಹಾಸ್ಯ ನನಗೆ ಸಹಿಸಲಾಗದಷ್ಟು ಹೆಚ್ಚು ಕೋಪ ತಂದು ನಾನು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದೆ” ಎಂದು ಬರೆದಿದ್ದಾರೆ.
”ಕ್ರಿಸ್, ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನದು ತಪ್ಪಾಗಿದೆ. ನಾನು ಮುಜುಗರಕ್ಕೊಳಗಾಗಿದ್ದೇನೆ ಮತ್ತು ನನ್ನ ವರ್ತನೆ ನಾನು ಆಗಲು ಬಯಸುವ ಮನುಷ್ಯನನ್ನು ಸೂಚಿಸುವುದಿಲ್ಲ. ಪ್ರೀತಿ ಮತ್ತು ದಯೆಯ ಜಗತ್ತಿನಲ್ಲಿ ಹಿಂಸೆಗೆ ಸ್ಥಳವಿಲ್ಲ.ಅಕಾಡೆಮಿ, ಕಾರ್ಯಕ್ರಮದ ನಿರ್ಮಾಪಕರು, ಎಲ್ಲಾ ಪಾಲ್ಗೊಳ್ಳುವವರು ಮತ್ತು ಪ್ರಪಂಚದಾದ್ಯಂತ ವೀಕ್ಷಿಸುತ್ತಿರುವ ಪ್ರತಿಯೊಬ್ಬರಿಗೂ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ವಿಲಿಯಮ್ಸ್ ಕುಟುಂಬ ಮತ್ತು ನನ್ನ ಕಿಂಗ್ ರಿಚರ್ಡ್ ಕುಟುಂಬಕ್ಕೆ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನ ನಡವಳಿಕೆಯು ನಮಗೆಲ್ಲರಿಗೂ ಒಂದು ಸುಂದರವಾದ ಪ್ರಯಾಣವಾಗಿದೆ ಎಂದು ನಾನು ತೀವ್ರವಾಗಿ ವಿಷಾದಿಸುತ್ತೇನೆ” ಎಂದು ಬರೆದಿದ್ದಾರೆ.
ಕ್ರಿಸ್ ರಾಕ್ ಗೆ ವಿಲ್ ಸ್ಮಿತ್ ಪ್ರತಿಷ್ಠಿತ ವೇದಿಕೆಯಲ್ಲೇ ಕೆನ್ನೆಗೆ ಹೊಡೆದು ಅಚ್ಚರಿ ಮೂಡಿಸಿದ್ದರು. ಕ್ರಿಸ್ ರಾಕ್, ವಿಲ್ ಸ್ಮಿತ್ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದು, ಈ ಎಲ್ಲಾ ಘಟನೆಗೆ ಕಾರಣವಾಗಿದೆ. “ಜಡಾ ನೀವು ಬೋಳು ತಲೆಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ನನಗೆ ಬಹಳ ಇಷ್ಟ” ಎಂದು ಕ್ರಿಸ್ ರಾಕ್ ತಮಾಷೆ ಮಾಡಿದ್ದರು, ಆ ವೇಳೆ ಕೋಪಗೊಂಡ ವಿಲ್ ಸ್ಮಿತ್ ವೇದಿಕೆಯೇರಿ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿ ನನ್ನ ಹೆಂಡತಿಯ ಹೆಸರನ್ನು ನಿನ್ನ ಬಾಯಲ್ಲಿ ಹೇಳಬೇಡ’ ಎಂದು ಎಚ್ಚರಿಕೆ ನೀಡಿದ್ದರು.