ಕಲಬುರಗಿ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದರೆ. ಸೇಡಂ ಕ್ಷೇತ್ರವೊಂದರಲ್ಲಿ ಮಾತ್ರ ಟಿಕೆಟ್ ಅಂತೀಮಗೊಳಿಸದಿರುವುದು ಆಶ್ಚರ್ಯ ಮೂಡಿಸಿದೆ.
ಬಿಜೆಪಿ ಘೋಷಿಸಿದ ಮೊದಲ ಪಟ್ಟಿಯಲ್ಲಿ ಸೇಡಂ ಕ್ಷೇತ್ರಕ್ಕೆ ನಿಶ್ಚಿತವಾಗಿ ಟಿಕೆಟ್ ಘೋಷಿಸಲಾಗುತ್ತದೆ ಎಂದು ಬಲವಾದ ನಿರೀಕ್ಷೆ ಹೊಂದಲಾಗಿತ್ತು. ಆದರೆ ಎಲ್ಲವೂ ಠುಸ್ಸಾಗಿದೆ.
ಸೇಡಂ ಕ್ಷೇತ್ರದ ಹಾಲಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಬಿಜೆಪಿ ರಾಜ್ಯ ವಕ್ತಾರರು, ವಿಭಾಗೀಯ ಪ್ರಭಾರಿಗಳು ಜತೆಗೇ ಬಿಜೆಪಿ ಪ್ರಣಾಳಿಕೆ ಸಮಿತಿಯ ಸದಸ್ಯರಾಗಿದ್ದಾರೆ. ಹೀಗಿದ್ದ ಮೇಲೂ ಟಿಕೆಟ್ ಘೋಷಣೆ ಮಾಡುವಲ್ಲಿ ಯಾವುದೇ ಅನುಮಾನಗಳಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಭಾಗದ ಟಿಕೆಟ್ ಆಕಾಂಕ್ಷಿ ಗಳೆಲ್ಲ ತೇಲ್ಕೂರ ಅವರಿಗೆ ದುಂಬಾಲು ಬಿದ್ದು ಟಿಕೆಟ್ ಗಾಗಿಒತ್ತಾಯಿಸಿರುವಾಗ ತೇಲ್ಕೂರ ಅವರಿಗೆಯೇ ಮೊದಲ ಪಟ್ಟಿಯಲ್ಲಿ ಹೆಸರಿರದಿರುವುದು ನಿಜಕ್ಕೂ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.
ಸಂತೋಷಿರಾಣಿಗೆ ಟಿಕೆಟ್?: ಸೇಡಂ ಕ್ಷೇತ್ರದಲ್ಲಿ ಶಾಸಕ ರಾಜಕುಮಾರ ಪಾಟೀಲ್ ಗಿಂತ ಇವರ ಪತ್ನಿ ಸೇಡಂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿರುವ ಸಂತೋಷಿರಾಣಿ ಪಾಟೀಲ ತೇಲ್ಕೂರ ಅವರೇ ಕ್ಷೇತ್ರದಾದ್ಯಂತ ಸಂಚರಿಸಿ ಉತ್ತಮ ಹೆಸರು ಹೊಂದಿದ್ದಾರೆ. ಪತಿ ರಾಜಕುಮಾರಗಿಂತ ಹತ್ತು ಪಟ್ಟು ಕ್ಷೇತ್ರದಲ್ಲಿ ಸಂಚರಿಸಿ ಚಿರಪರಿಚಿತರಾಗಿದ್ದಾರೆ. ಶಾಸಕ ತೇಲ್ಕೂರ ಗಿಂತ ಸಂತೋಷಿರಾಣಿ ಅವರೇ ಅಭ್ಯರ್ಥಿಯಾದರೆ ಪಕ್ಷಕ್ಕೆ ಅನುಕೂಲ ಎಂಬುದಾಗಿ ವರದಿ ಇರೋದ್ರದಿಂದ ಜತೆಗೇ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಬಹುದು ಎಂಬ ಲೆಕ್ಕಾಚಾರ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಿಸಲಾಗಿಲ್ಲಎನ್ನಲಾಗುತ್ತಿದೆ.
ಕಳೆದ ಸಲ ರಾಜಕುಮಾರ ಪಾಟೀಲ್ ಗೆಲ್ಲುವಲ್ಲಿ ಸಂತೋಷಿರಾಣಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಯಾರೂ ಅಲ್ಲಗಳೆಯುವಂತಿಲ್ಲ. ಮೇಲಾಗಿ ಶಾಸಕರು ಬೆಂಗಳೂರು ಹಾಗೂ ಪಕ್ಷದ ಸಂಘಟನೆಗಾಗಿ ಪ್ರವಾಸದಲ್ಲಿದ್ದಾಗ ಸೇಡಂದಲ್ಲೇ ಉಳಿದು ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದಿಸಿರುವುದು ಎಲ್ಲಕ್ಕಿಂತ ಮುಖ್ಯವಾಗಿ ಸೇಡಂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ 15 ಸಾವಿರಕ್ಕೂ ಅಧಿಕ ಮಹಿಳಾ ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ನಿಂದ 60 ಕೋ.ರೂ ಸಾಲ ಕೊಡಿಸಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಕೈ ಜೋಡಿಸಿರುವುದನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ರಾಜಕುಮಾರ ಪಾಟೀಲ್ ಬದಲು ಸಂತೋಷಿರಾಣಿ ಅವರಿಗೆ ಟಿಕೆಟ್ ಕೊಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಮುಖವಾಗಿ ರಾಜಕುಮಾರ ಪಾಟೀಲ್ ಮೊದಲ ಬಾರಿಗೆ ಶಾಸಕರಾಗಿದ್ದು, ಮೊದಲ ಅವಧಿಯಲ್ಲೇ ಪಕ್ಷದ ಬೆಳವಣಿಗೆ ನಿಷ್ಠಾವಂತ ರಾಗಿ ಹಗಲಿರಳು ಶ್ರಮಿಸಿದ್ದನ್ನು ಅವಲೋಕಿಸಿ ಪಕ್ಷದ ಸಂಘಟನೆಗೆ ಬಳಸಿಕೊಳ್ಳಲು ಮುಂದಾಗಿರಬಹುದು ಮತ್ತೊಂದು ನಿಟ್ಟಿನಲ್ಲಿ ಅವಲೋಕಿಸಲಾಗುತ್ತಿದೆ.
ಪ್ರಮುಖವಾಗಿ ಸೇಡಂ ಪಕ್ಕದ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಡಿಯೋ ಬಾಂಬ್ ಸಿಡಿಸಿ ಆರೋಪ ಮಾಡಿದ್ದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದರಿಂದ ಜತೆಗೇ ನಾಲ್ಕು ವರ್ಷಗಳ ಹಿಂದೆ ಬಿಜೆಪಿಗೆ ಬಂದು ಎಲ್ಲ ಅಧಿಕಾರ ಅನುಭವಿಸಿರುವ ಮಾಜಿ ಸಚಿವ ಬಾಬುರಾವ ಚಿಂಚನಸೂರಗೆ ಸೋಲಿಸುವ ಮುಖಾಂತರ ತಕ್ಕಪಾಠ ಕಲಿಸಲು ಬಿಜೆಪಿ ಉತ್ಸುಕತೆ ಹೊಂದಿದ್ದರಿಂದ ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಲು ಮುಂದಾಗಿದೆ.
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ನಿಟ್ಟಿನಲ್ಲಿ ರಾಜಕುಮಾರ ಪಾಟೀಲ್ ತೇಲ್ಕೂರ ಅವರೇ ಗುರುಮಿಠಕಲ್ ದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.