ಮುಂಬಯಿ: ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರವು ಭಾಷಾ ಬಳಕೆಗಾಗಿ ವ್ಯಾಪಕ ಟೀಕೆಗೋಳಗಾದ ನಂತರ ಪೌರಾಣಿಕ ಕಥಾ ಚಿತ್ರದ ನಿರ್ಮಾಪಕರು “ಕೆಲವು ಸಂಭಾಷಣೆಗಳನ್ನು ಪರಿಷ್ಕರಿಸಲು” ನಿರ್ಧರಿಸಿದ್ದಾರೆ ಎಂದು ಚಿತ್ರದ ಸಂಭಾಷಣೆ ಬರಹಗಾರ ಮನೋಜ್ ಮುಂತಾಶಿರ್ ಶುಕ್ಲಾ ಭಾನುವಾರ ಹೇಳಿಕೆ ನೀಡಿದ್ದಾರೆ.
ಹಿಂದಿ ಸಂಭಾಷಣೆಗಳು ಮತ್ತು ಹಾಡುಗಳನ್ನು ಬರೆದಿರುವ ಶುಕ್ಲಾ, ಈ ವಾರದೊಳಗೆ ತಿದ್ದುಪಡಿ ಮಾಡಿದ ಸಾಲುಗಳನ್ನು ಚಿತ್ರಕ್ಕೆ ಸೇರಿಸಲಾಗುವುದು ಎಂದು ಹೇಳಿದ್ದಾರೆ.
“ನನಗೆ ನಿಮ್ಮ ಭಾವನೆಗಳಿಗಿಂತ ದೊಡ್ಡದು ಏನೂ ಇಲ್ಲ. ನನ್ನ ಡೈಲಾಗ್‌ಗಳ ಪರವಾಗಿ ನಾನು ಲೆಕ್ಕವಿಲ್ಲದಷ್ಟು ವಾದಗಳನ್ನು ನೀಡಬಲ್ಲೆ, ಆದರೆ ಇದು ನಿಮ್ಮ ನೋವನ್ನು ಕಡಿಮೆ ಮಾಡುವುದಿಲ್ಲ. ನಾನು ಮತ್ತು ಚಿತ್ರದ ನಿರ್ಮಾಪಕ-ನಿರ್ದೇಶಕರು ನಿಮಗೆ ನೋವುಂಟು ಮಾಡುವ ಕೆಲವು ಸಂಭಾಷಣೆಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದೇವೆ. ಅವುಗಳನ್ನು ಈ ವಾರ ಚಿತ್ರಕ್ಕೆ ಸೇರಿಸುತ್ತೇವೆ ಎಂದು ಶುಕ್ಲಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳಿನಲ್ಲಿ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾದ ”ಆದಿಪುರುಷ್”, ರಾಘವ್ (ರಾಮ) ಆಗಿ ಪ್ರಭಾಸ್, ಜಾನಕಿ (ಸೀತೆ) ಆಗಿ ಕೃತಿ ಸನೋನ್ ಮತ್ತು ಲಂಕೇಶ್ (ರಾವಣ) ಆಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.
ಓಂ ರಾವುತ್ ನಿರ್ದೇಶಿಸಿದ ಮತ್ತು ಟಿ-ಸೀರೀಸ್ ನಿರ್ಮಿಸಿದ, ಬಿಗ್ ಬಜೆಟ್ ಚಿತ್ರ ”ಆದಿಪುರುಷ್” ಅದರ ಕಳಪೆ ವಿಎಫ್‌ಎಕ್ಸ್ ಮತ್ತು ಆಡುಮಾತಿನ ಸಂಭಾಷಣೆಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟೀಕೆಗೆ ಮತ್ತು ಆಕ್ರೋಶಕ್ಕೆ ಒಳಗಾಗಿದೆ. ಶುಕ್ಲಾ ಅವರು ‘ಲಂಕಾ ದಹನ’ ಸನ್ನಿವೇಶದಲ್ಲಿ ಬಳಸಿರುವ ಹನುಮಂತನ ಸಂಭಾಷಣೆಗಾಗಿ ವ್ಯಾಪಕ ಟೀಕೆ ಎದುರಿಸಿದ್ದಾರೆ.