ಬೆಳಗಾವಿ: ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ತೀವ್ರ ಅಸಮಾಧಾನವಿದೆ. ನನ್ನ ಬೆಂಬಲಿಗರಿಗೂ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಅನೇಕ ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಎರಡು ದಿನದಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ನನ್ನ ಕ್ಷೇತ್ರ ವ್ಯಾಪ್ತಿ ಕೇವಲ ಯಮಕನಮರಡಿ ಅಲ್ಲ. ಇಡೀ ರಾಜ್ಯಾದ್ಯಂತ ಪಕ್ಷ ಸಂಘಟಿಸುವ ಕೆಲಸ ಮಾಡುತ್ತ ಬಂದಿದ್ದೇನೆ. ನನಗೆ ಸಚಿವ ಸ್ಥಾನ ತಪ್ಪಿಸಿದವರು ಬೆಂಗಳೂರು ಹಾಗೂ ದೆಹಲಿಯಲ್ಲಿದ್ದಾರೆ. ವಾರದೊಳಗೆ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ’ ಎಂದರು.
ರಾಜೀನಾಮೆಗೆ 55 ಸದಸ್ಯರ ನಿರ್ಧಾರ: ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದೆ ಇರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ 14 ಜಿಪಂ ಸದಸ್ಯರು, 28 ತಾಪಂ, ನಾಲ್ವರು ಎಪಿಎಂಸಿ, ಇಬ್ಬರು ಮಹಾನಗರಪಾಲಿಕೆ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಶುಕ್ರವಾರ ಸತೀಶ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸದಸ್ಯರು, ಒಟ್ಟು 55ಕ್ಕೂ ಹೆಚ್ಚು ಪದಾಧಿಕಾರಿಗಳು ಈಗ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದರಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಸಹ ಸೇರಿದ್ದಾರೆ ಎಂದರು.
ಪಾಟೀಲ ಬೆಂಬಲಿಗರಿಂದ 11ರಂದು ವಿಜಯಪುರ ಬಂದ್
ವಿಜಯಪುರ: ಬಬಲೇಶ್ವರ ಶಾಸಕ ಡಾ.ಎಂ.ಬಿ. ಪಾಟೀಲ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನದ ಜತೆಗೆ ಜಲ ಸಂಪನ್ಮೂಲ ಖಾತೆ ನೀಡುವಂತೆ ಆಗ್ರಹಿಸಿ ಸೋಮವಾರ ವಿಜಯಪುರ ಬಂದ್‌ಗೆ ಕರೆ ನೀಡಲು ಬೆಂಬಲಿಗರು ನಿರ್ಧರಿಸಿದ್ದಾರೆ.
ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಸಾರ್ವಜನಿಕ ಸಂರ್ಪಕಾ ಧಿಕಾರಿ ಡಾ.ಮಹಾಂತೇಶ ಬಿರಾದಾರ, ಭವಿಷ್ಯದ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆದಿದೆ. ಹೀಗಾಗಿ ಸೋಮವಾರ ಮಾಜಿ ಶಾಸಕ ರಾಜು ಆಲಗೂರ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಲು ಯೋಜಿಸಲಾಗುತ್ತಿದೆ. ಶನಿವಾರ, ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.