Advertisement

ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ ಜೆಡಿಎಸ್‌ ಬಿಡ್ತಾರಾ?

11:19 PM Dec 17, 2019 | Lakshmi GovindaRaj |

ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಕಮಲ ಅರಳಿದ ಬೆನ್ನ ಹಿಂದೆಯೇ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಶಾಸಕ ಕೆ.ಸುರೇಶ್‌ಗೌಡ ಅವರು ಜೆಡಿಎಸ್‌ ತೊರೆದು, ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಕೆ.ಸಿ.ನಾರಾಯಣಗೌಡ, ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್‌ಗೌಡ ಈ ಹಿಂದೆಯೇ ಬಿಜೆಪಿ ಸೇರುವರೆಂಬ ಬಗ್ಗೆ ಗುಸುಗುಸು ಕೇಳಿ ಬರಲಾರಂಭಿಸಿತ್ತು. ಆದರೆ, ಆಪರೇಷನ್‌ ಕಮಲದ ಸೆಳೆತಕ್ಕೆ ಕೆ.ಸಿ.ನಾರಾಯಣಗೌಡರು ಒಳಗಾದರಾದರೂ ಜಿಲ್ಲೆಯೊಳಗೆ ನೆಲೆಯೇ ಇಲ್ಲದ ಬಿಜೆಪಿ ಸೇರುವ ಬಗ್ಗೆ ಈ ಇಬ್ಬರು ಶಾಸಕರು ಹಿಂದೇಟು ಹಾಕಿದ್ದರು.

ಕಳೆದ ಆಗಸ್ಟ್‌ನಲ್ಲಿ ಕೆಆರ್‌ಎಸ್‌ಗೆ ಬಾಗಿನ ಸಲ್ಲಿಸಲು ಸಿಎಂ ಯಡಿಯೂರಪ್ಪ ಆಗಮಿಸಿದ್ದ ವೇಳೆ ಕೆ.ಸಿ.ನಾರಾಯಣಗೌಡರೊಂದಿಗೆ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಆ ಸಮಯದಲ್ಲೂ ಈ ಇಬ್ಬರೂ ಶಾಸಕರು ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವ ಬಗ್ಗೆ ವದಂತಿ ಹರಡಿತ್ತು. ಈಗ ಕೆ.ಸಿ.ನಾರಾಯಣಗೌಡರ ಗೆಲುವಿನ ನಂತರ ಮತ್ತೆ ಶಾಸಕರ ಬಿಜೆಪಿ ಸೇರ್ಪಡೆ ಬಗ್ಗೆ ಕೇಳಿ ಬರುತ್ತಿದೆ.

ಯಾವ ಶಾಸಕರೂ ಪಕ್ಷ ಬಿಡಲ್ಲ
ಮೈಸೂರು: ಜೆಡಿಎಸ್‌ನ ಯಾವುದೇ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಜೆಡಿಎಸ್‌ನ ಮತ್ತಿಬ್ಬರು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬುದೆಲ್ಲಾ ಊಹಾಪೋಹ ಎಂದು ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಎಲ್ಲ ಶಾಸಕರೊಂದಿಗೂ ನಿತ್ಯ ಸಂಪರ್ಕದಲ್ಲಿದ್ದೇವೆ.

ಹಲವರು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಹೋಗಿದ್ದಾರೆ. ಆದರೂ, ಜೆಡಿಎಸ್‌ ಶಾಸಕರು ಪಕ್ಷ ಬಿಡುತ್ತಾರೆ ಎಂಬ ಚರ್ಚೆ ಹಲವು ದಿನಗಳಿಂದಲೂ ನಡೆಯುತ್ತಿದೆ. ಇದೆಲ್ಲ ಸತ್ಯಕ್ಕೆ ದೂರವಾದ ವಿಚಾರ. ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಜೆಡಿಎಸ್‌ ಬಿಟ್ಟು ಹೋಗುವುದಿಲ್ಲ ಎಂದರು.

Advertisement

“50 ಕೋಟಿ, ಮಂತ್ರಿ ಆಫ‌ರ್‌ ತಿರಸ್ಕರಿಸಿದ್ದೇನೆ’
ಮಳವಳ್ಳಿ: ಜಿಲ್ಲೆಯ ಆರು ಮಂದಿ ಜೆಡಿಎಸ್‌ ಶಾಸಕರು ನೈತಿಕ ಸಿದ್ಧಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದು, ಜೆಡಿಎಸ್‌ ಪಕ್ಷಕ್ಕೆ ನಮ್ಮೆಲ್ಲಾ ಶಾಸಕರು ನಿಷ್ಠರಾಗಿದ್ದೇವೆ. ಯಾವ ಪಕ್ಷಕ್ಕೂ ಹೋಗಲ್ಲ ಎಂದು ಶಾಸಕ ಡಾ. ಕೆ.ಅನ್ನದಾನಿ ಸ್ಟಷ್ಟಪಡಿಸಿದರು. ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ನಡೆದ ವಿಶೇಷ ಪೂಜೆ ನೆರವೇರಿಸಿ ಮಾತನಾಡಿ, ಬಿಜೆಪಿಯಿಂದ ನನಗೂ 50 ಕೋಟಿ ರೂ.ಜೊತೆಗೆ ಮಂತ್ರಿಗಿರಿ ನೀಡುತ್ತೇನೆ ಎಂದು ಆಫ‌ರ್‌ ಬಂದಿತ್ತು.

ಆದರೆ, ನಾನು ಪಕ್ಷ ನಿಷ್ಠನಾಗಿದ್ದರಿಂದ ತಿರಸ್ಕರಿಸಿದೆ. ಎಲ್ಲಾ 6 ಶಾಸಕರು ಜೆಡಿಎಸ್‌ನಲ್ಲೇ ಇದ್ದು, ಪಕ್ಷ ಸಂಘಟನೆಗೆ ನಿರಂತರವಾಗಿ ಶ್ರಮಿಸುತ್ತೇವೆ. ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದ ವೇಳೆ ಹನಿ ನೀರಾವರಿ, ಸಣ್ಣ ನೀರಾವರಿ ಸೇರಿದಂತೆ ಮಳವಳ್ಳಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ 150 ಕೋಟಿ ನೀಡಿದ್ದರು. ಆದರೆ, ಈಗಿನ ಬಿಜೆಪಿ ಸರ್ಕಾರ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ತಡೆ ಹಿಡಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next