ನವದೆಹಲಿ: 2016ರಲ್ಲಿ ಕೇಂದ್ರ ಸರ್ಕಾರ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದಗೊಳಿಸಿರುವ ಕೇಂದ್ರ ಸರ್ಕಾರ ಕ್ರಮ ಐತಿಹಾಸಿಕವಾದದ್ದು ಎಂದು ಸುಪ್ರೀಂಕೋರ್ಟ್ ಸೋಮವಾರ (ಜನವರಿ 02) ತೀರ್ಪು ನೀಡಿದ್ದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ:ರಜೌರಿಯಲ್ಲಿ ಮತ್ತೆ ಉಗ್ರರ ಅಟ್ಟಹಾಸ : ಐಇಡಿ ಸ್ಫೋಟದಲ್ಲಿ ಮಗು ಸಾವು
ನೋಟು ಅಮಾನ್ಯೀಕರಣದ ನಿರ್ಧಾರದ ವಿರುದ್ಧ ಸತತವಾಗಿ ವಾಗ್ದಾಳಿ, ಪ್ರಚಾರಾಂದೋಲನ ನಡೆಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಇದೀಗ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಕ್ಷಮೆಯಾಚಿಸುತ್ತಾರೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
ನೋಟು ಅಮಾನ್ಯೀಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಬಿಜೆಪಿ ಮುಖಂಡ ರವಿ ಶಂಕರ್ ಪ್ರಸಾದ್ ಪ್ರತಿಕ್ರಿಯೆ ನೀಡಿ, 2016ರಲ್ಲಿ 500, 1000 ಮುಖಬೆಲೆಯ ನೋಟು ನಿಷೇಧಿಸಿದ್ದರಿಂದ ಭಯೋತ್ಪಾದನೆ ಚಟುವಟಿಕೆಗೆ ಆರ್ಥಿಕ ನೆರವು ನೀಡುವಲ್ಲಿ ದೊಡ್ಡ ಹಿನ್ನಡೆ ತಂದೊಡ್ಡಿರುವುದು ಸಾಬೀತಾಗಿದೆ.
ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಅಷ್ಟೇ ಅಲ್ಲ ದೇಶದ ಹಿತಾಸಕ್ತಿಯದ್ದಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ರಾಹುಲ್ ಗಾಂಧಿ ಈಗ ಕ್ಷಮೆಯಾಚಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನೋಟು ಅಮಾನ್ಯೀಕರಣ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ನ ಪಂಚಸದಸ್ಯ ನ್ಯಾಯಾಧೀಶರ ಪೀಠ, ವಿಚಾರಣೆ ನಡೆಸಿ 4-1ರ ಅನುಪಾತದಲ್ಲಿ ಬಹುಮತದ ತೀರ್ಪು ನೀಡಿತ್ತು. ಆದರೆ ಓರ್ವ ಜಡ್ಜ್ ಮಾತ್ರ ಭಿನ್ನ ತೀರ್ಪು ನೀಡಿದ್ದು, ಇದೊಂದು ಕಾನೂನು ಬಾಹಿರ ಕ್ರಮ ಎಂದು ತಿಳಿಸಿದ್ದರು.