ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ(ಜೂನ್ 15)ವೂ ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದು, ಕಾಂಗ್ರೆಸ್ ಪಕ್ಷ ಪ್ರತಿಭಟನೆಯನ್ನು ಮುಂದುವರಿಸಿದೆ. ಈ ಬಗ್ಗೆ ಎನ್ ಡಿಟಿವಿ ಜತೆ ಮಾತನಾಡಿರುವ ಛತ್ತೀಸ್ ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ ಎಷ್ಟು ದಿನಗಳವರೆಗೆ ವಿಚಾರಣೆ ನಡೆಸುತ್ತದೆಯೋ ಅಲ್ಲಿಯವರೆಗೂ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಲಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಬಂಧನವಾಗಲಿದೆಯೇ?
ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ ಎಂದು ಭಾವಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಭಾಘೇಲ್, ಜಾರಿ ನಿರ್ದೇಶನಾಲಯ ಯಾವುದೇ ಪ್ರಕರಣವಿಲ್ಲದೆಯೂ ಬಂಧಿಸಬಹುದು. ಆದರೆ ಅವರನ್ನು ಬಂಧಿಸುತ್ತಾರೆ ಎಂದು ಭಾವಿಸುವುದಿಲ್ಲ. ಯಾಕೆಂದರೆ ರಾಹುಲ್ ವಿರುದ್ಧ ಸಾಕ್ಷ್ಯಾಧಾರವಿಲ್ಲ. ಕೇವಲ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಶೇಷ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಹೊಸ ಲೋಕಾಯುಕ್ತ ನೇಮಕ ಬೆನ್ನಲ್ಲೇ ಬಿಜೆಪಿಗೆ ಶುರುವಾಯ್ತು ಟೀಕೆ
ರಾಹುಲ್ ಗಾಂಧಿಗೆ ಕಿರುಕುಳ ನೀಡಲು ಮತ್ತು ಕಾಂಗ್ರೆಸ್ ಪಕ್ಷವನ್ನು ಕೆಟ್ಟದಾಗಿ ಬಿಂಬಿಸಲು ಕೇಂದ್ರ ಸರ್ಕಾರ ಈ ತಂತ್ರವನ್ನು ಅನುಸರಿಸುತ್ತಿದೆ ಎಂದು ಬಾಘೇಲ್ ದೂರಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರಡನೇ ದಿನವೂ ಸುಮಾರು ಹತ್ತು ಗಂಟೆಗಳ ಕಾಲ ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿತ್ತು. ಸೋಮವಾರವೂ ಕೂಡಾ ಹತ್ತು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಇದೊಂದು ಸೇಡಿನ ರಾಜಕೀಯ ಎಂದು ಕಾಂಗ್ರೆಸ್ ಆರೋಪಿಸಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.