ನವದೆಹಲಿ: ದೆಹಲಿಯ ಪುರಸಭೆ ಚುನಾವಣೆಯನ್ನು ಸೂಕ್ತ ಸಮಯದಲ್ಲಿ ನಡೆಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ (ಮಾರ್ಚ್ 23) ಭಾರತೀಯ ಜನತಾ ಪಕ್ಷಕ್ಕೆ ಸವಾಲು ಹಾಕಿದ್ದಲ್ಲದೇ, ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭಯ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ಪುರಸಭೆ ಚುನಾವಣೆ ಮುಂದೂಡಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಒಂದು ವೇಳೆ ಭಾರತೀಯ ಜನತಾ ಪಕ್ಷ ಸೂಕ್ತ ಸಮಯದಲ್ಲಿ ಚುನಾವಣೆ ನಡೆಸಿ ಜಯಗಳಿಸಿದರೆ ಆಮ್ ಆದ್ಮಿ ಪಕ್ಷ ರಾಜಕೀಯ ತೊರೆಯಲಿದೆ ಎಂದು ಸವಾಲು ಹಾಕಿದ್ದಾರೆ.
ದೆಹಲಿಯ ಮೂರು ನಾಗರಿಕ ಆಡಳಿತ ಹೊಂದಿರುವ ಉತ್ತರ, ಪೂರ್ವ ಮತ್ತು ದಕ್ಷಿಣವನ್ನು ಏಕೀಕರಿಸುವ ಮಸೂದೆಗೆ ಮಂಗಳವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ನಂತರ ಕೇಜ್ರಿವಾಲ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಒಂದು ವೇಳೆ ಭಾರತೀಯ ಜನತಾ ಪಕ್ಷ ಸಮಯಕ್ಕೆ ಸರಿಯಾಗಿ ದೆಹಲಿ ಪುರಸಭೆ ಚುನಾವಣೆ ನಡೆಸಿ ಜಯಗಳಿಸಿದರೆ ನಾವು ರಾಜಕೀಯ ತೊರೆಯಲಿದ್ದೇವೆ ಎಂದು ಕೇಜ್ರಿವಾಲ್ ಸುದ್ದಿಗಾರರ ಜತೆ ಮಾತನಾಡುತ್ತ ಪುನರುಚ್ಚರಿಸಿದ್ದಾರೆ.
ಇಡೀ ಪ್ರಪಂಚದಲ್ಲಿಯೇ ತಮ್ಮದು ಅತೀ ದೊಡ್ಡ ರಾಜಕೀಯ ಪಕ್ಷ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಪುಟ್ಟ ಪಕ್ಷ ಮತ್ತು ಪುಟ್ಟ ಚುನಾವಣೆಗಾಗಿ ಭಯ ಪಡುತ್ತಿದೆ. ಈ ನಿಟ್ಟಿನಲ್ಲಿ ದೆಹಲಿ ಪುರಸಭೆ ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ಘೋಷಿಸುವಂತೆ ಸವಾಲು ಹಾಕುವುದಾಗಿ ಕೇಜ್ರಿವಾಲ್ ಹೇಳಿದರು.