Advertisement

ಕಪ್ಪುಪಟ್ಟಿಗೆ ಸೇರಲಿದೆಯೇ ಪಾಕಿಸ್ಥಾನ?

12:07 PM Nov 03, 2015 | mahesh |

ಮಣಿಪಾಲ: ಉಗ್ರರ ಅಡಗುತಾಣ, ಭಯೋತ್ಪಾದಕರ ನೆಲೆ, ರಕ್ತ ಹರಿಸುವ ಕ್ರಿಮಿಗಳಿಗೆ ಆಶ್ರಯ ನೀಡಿರುವ ಪಾಪಿ ರಾಷ್ಟ್ರ ಪಾಕಿಸ್ಥಾನಕ್ಕೆ ಸಂಕಷ್ಟ ಎದುರಾಗಿದೆ. ಕುಖ್ಯಾತ ಪಾತಕಿಗಳನ್ನು ತನ್ನ ನೆಲದಲ್ಲಿ ಬಚ್ಚಿಟ್ಟುಕೊಂಡು, ಉಗ್ರರಿಗೆ ಸಾಥ್‌ ನೀಡುತ್ತಿರುವ ಪಾಕಿಸ್ಥಾನ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೂಮ್ಮೆ ಮುಜುಗರಕ್ಕೀಡಾಗುವ ಪರಿಸ್ಥಿತಿ ಎದುರಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರರಿಗೆ ಹಣದ ಹರಿವು ನಿಲ್ಲಿಸಲು ಇರುವ ಹಣಕಾಸು ನಿಗಾ ಕಾರ್ಯಪಡೆ (ಎಫ್ಎಟಿಎಫ್) ಪಾಕ್‌ಗೆ ದೊಡ್ಡ ಶಾಕ್‌ ನೀಡುವ ಸಾಧ್ಯತೆಗಳಿವೆ. ಇದೀಗ ಎಫ್ಎಟಿಎಫ್ನ ಪಟ್ಟಿಯಲ್ಲಿ ಬೂದು ಬಣ್ಣದಲ್ಲಿರುವ ಪಾಕಿಸ್ಥಾನ ಕಪ್ಪು ಪಟ್ಟಿಗೆ ಸೇರ್ಪಡೆಗೊಳ್ಳುವ ಭೀತಿ ಎದುರಾಗಿದೆ.

Advertisement

ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌
1989ರಲ್ಲಿ ಎಫ್ಎಟಿಎಫ್ ಸ್ಥಾಪಿಸಲಾಗಿದೆ. ಉಗ್ರರಿಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ, ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಬೆದರಿಕೆ ಒಡ್ಡುವ ಕೃತ್ಯ ಗಳನ್ನು ತಡೆ ಯುವ ಹೊಣೆಗಾರಿಕೆ ಈ ಕಾರ್ಯಪಡೆಯದ್ದಾಗಿದೆ. ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ,ರಷ್ಯಾ, ಚೀನ ಸಹಿತ ವಿಶ್ವದ ಒಟ್ಟು 39 ದೇಶಗಳು ಎಫ್ಎಟಿಎಫ್ ಸದಸ್ಯ ರಾಷ್ಟ್ರಗಳಾಗಿವೆ. ಎಫ್ಎಟಿಎಫ್ ನಿಗದಿಪಡಿಸಿದ ಕ್ರಮಗಳನ್ನು ಅನುಸರಿಸದೇ ಇದ್ದರೆ ಅಂಥ ದೇಶಗಳನ್ನು ಬೂದು ಅಥವಾ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

ಎಫ್ಎಟಿಎಫ್ ಸಭೆಯಲ್ಲಿ ನಿರ್ಧಾರ
ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ ಹೊತ್ತು, ಬೂದು ಪಟ್ಟಿಯಲ್ಲಿರುವ ಪಾಕಿಸ್ಥಾನ ಈಗ ವಿನಾಶದ ಅಂಚಿನತ್ತ ಸರಿದಿದ್ದು, ಅದರಿಂದ ಹೊರಬರಲು ಹೆಣಗಾಡುತ್ತಿದೆ. ಉಗ್ರರ ಹಣಕಾಸು ವ್ಯವಹಾರಗಳ ಮೇಲೆ ಕಣ್ಣಿಡುವ ಹಣಕಾಸು ನಿಗಾ ಕಾರ್ಯಪಡೆ ಪ್ಯಾರಿಸ್‌ನಲ್ಲಿ ಅ.21-23ರ ವರೆಗೆ ಸಭೆ ಸೇರಲಿದೆ. ಈ ಸಭೆಯಲ್ಲಿ ಪಾಕಿಸ್ಥಾನವನ್ನು ಬೂದು ಪಟ್ಟಿಯಿಂದ ಹೊರಗಿ ಡಬೇಕೇ?, ಬೇಡವೇ? ಎಂಬ ಬಗ್ಗೆ ತೀರ್ಮಾನ ಆಗಲಿದೆ.

ಕಪ್ಪುಪಟ್ಟಿಯಲ್ಲಿರುವ ರಾಷ್ಟ್ರಗಳು
ಉತ್ತರ ಕೊರಿಯಾ ಹಾಗೂ ಇರಾನ್‌ ಎಫ್ಎಟಿಎಫ್ ಕಪ್ಪುಪಟ್ಟಿಯಲ್ಲಿರುವ ಪ್ರಮುಖ ರಾಷ್ಟ್ರಗಳಾಗಿದೆ. ಉತ್ತರ ಕೊರಿಯಾ ಏಷ್ಯನ್‌ ರಾಷ್ಟ್ರ ಅಂತಾರಾಷ್ಟ್ರೀಯ ಸಹಕಾರ, ಸಹಾಯ ಗಳಿಂದ ವಂಚಿತವಾಗಿದೆ. ಇರಾನ್‌ ಜಾಗತಿಕ ಶಕ್ತಿಗಳೊಂದಿಗೆ 2015ರಲ್ಲೇ ಪರಮಾಣು ಒಪ್ಪಂದ ಮಾಡಿಕೊಂಡಿತ್ತಾದರೂ 2008 ರಿಂದಲೇ ಕಪ್ಪುಪಟ್ಟಿಯಲ್ಲಿ ಇದೆ. ಕಪ್ಪುಪಟ್ಟಿಯಿಂದ ತಪ್ಪಿಸಿಕೊಳ್ಳಲು ಎಫ್ಎಟಿಎಫ್ ಸದಸ್ಯ ರಾಷ್ಟ್ರಗಳ ಪೈಕಿ ಮೂರು ಮತಗಳ ಬೆಂಬಲ ಪಡೆಯಬೇಕು. ಬೂದು ಪಟ್ಟಿಯಿಂದ ತಪ್ಪಿಸಿಕೊಳ್ಳಲು 12 ಮತಗಳು ಅಗತ್ಯ. ಸದ್ಯ ಪಾಕಿಸ್ಥಾನ ಕಪ್ಪು ಪಟ್ಟಿಯಿಂದ ತಪ್ಪಿಸಿ ಕೊಂಡರೂ ಬೂದು ಪಟ್ಟಿಯಿಂದ ಹೊರ ಬರುವುದು ಕಷ್ಟ.

ಏನಿದು ಬೂದುಪಟ್ಟಿ ?
ತನ್ನ ನಿಯಮಾವಳಿಗಳನ್ನು ಮೀರಿ ರಾಷ್ಟ್ರವೊಂದು ಕಾರ್ಯಾಚರಿಸುತ್ತಿದ್ದಲ್ಲಿ ಎಫ್ಎಟಿಎಫ್ ಮೊದಲ ಎಚ್ಚರಿಕೆಯಾಗಿ ಆ ದೇಶವನ್ನು ಬೂದು ಪಟ್ಟಿಗೆ ಸೇರಿಸುತ್ತದೆ. ಇದರ ಹೊರತಾಗಿಯೂ ಆ ದೇಶ ತನ್ನ ಕಾರ್ಯಚಟುವಟಿಕೆಗಳಲ್ಲಿ ಬದಲಾವಣೆ ತಂದುಕೊಳ್ಳದಿದ್ದಲ್ಲಿ ಅಂತಹ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಬೂದು ಪಟ್ಟಿಗೆ ಒಂದು ದೇಶ ಸೇರಿದರೆ ಅದು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಐಎಂಎಫ್, ವಿಶ್ವಬ್ಯಾಂಕ್‌, ಎಡಿಬಿ ಸಹಿತ ವಿವಿಧ ಹಣಕಾಸು ಸಂಸ್ಥೆಗಳು ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ವಿವಿಧ ರಾಷ್ಟ್ರಗಳು ಆ ದೇಶದೊಂದಿಗಿನ ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್‌ ಏಜೆನ್ಸಿಗಳು ಅಂತಹ ದೇಶಕ್ಕೆ ಕಡಿಮೆ ರೇಟಿಂಗ್‌ ನೀಡುತ್ತವೆ. ಇನ್ನು ಕಪ್ಪುಪಟ್ಟಿಗೆ ಸೇರಿಸಲ್ಪಟ್ಟರೆ ಆ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣ ಏಕಾಂಗಿಯಾಗುತ್ತದೆ.

Advertisement

ಪಾಕ್‌ಗೆ ಹೊಸದೇನಲ್ಲ
ಕುತಂತ್ರಿ ಪಾಕಿಸ್ಥಾನಕ್ಕೆ ಬೂದು ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೊಸದೇನಲ್ಲ. ಈ ಹಿಂದೆ 2012 ರಿಂದ 2015ರ ವರೆಗೆ ಬೂದು ಪಟ್ಟಿಯಲ್ಲಿತ್ತು. ಭಾರತದ ನಿರಂತರ ಒತ್ತಡದ ಬಳಿಕ 2018ರ ಜೂನ್‌ ಕೊನೆಯಲ್ಲಿ ಮತ್ತೆ ಪಾಕಿಸ್ಥಾನವನ್ನು ಬೂದು ಪಟ್ಟಿಗೆ ಸೇರಿಸಲಾಗಿತ್ತು. ಕಳೆದ ವರ್ಷವೂ ಪುಲ್ವಾಮಾ ದಾಳಿಯಾದ ಅನಂತರ ಪಾಕಿಸ್ಥಾನವನ್ನು ಯಾವುದೇ ಕಾರಣಕ್ಕೂ ಬೂದು ಪಟ್ಟಿಯಿಂದ ಹೊರಗಡೆ ಇಡಬಾರದು ಎಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಸಹ ಪಾಕಿಸ್ಥಾನವನ್ನು ಬೂದು ಪಟ್ಟಿಯಲ್ಲೇ ಇರಿಸುವಂತೆ ಎಫ್ಎಟಿಎಫ್ ಮೇಲೆ ಒತ್ತಡ ಹಾಕಿತ್ತು. ಪಾಕಿಸ್ಥಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಎಫ್ಎಟಿಎಫ್ ಪಾಕ್‌ ಅನ್ನು 2020ರ ಅಕ್ಟೋಬರ್‌ ವರೆಗೆ ಬೂದು ಪಟ್ಟಿಯಲ್ಲಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದೀಗ ಈ ಎಫ್ಎಟಿಎಫ್ ನಿಗದಿಪಡಿಸಿದ ಸಮಯ ಮುಗಿಯುತ್ತಾ ಬಂದಿದ್ದು, ಮುಂಬರುವ ಸಭೆಯಲ್ಲಿ ಪಾಕ್‌ ಭವಿಷ್ಯ ನಿರ್ಧಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next