ಬೆಂಗಳೂರು: ಲೋಕಸಭೆ ಚುನಾವಣೆಗೆ ಟಿಕೆಟ್ ತಪ್ಪಿದ್ದರಿಂದ ಗುಡುಗಿದ್ದ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಅವರು ತಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಘೋಷಿಸಿದರು.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ತೊರೆಯುವುದಿಲ್ಲ, ಕಾಂಗ್ರೆಸ್ ಸೇರುವುದಿಲ್ಲ. ಆದರೆ ಬಿಜೆಪಿ ಶುದ್ಧೀಕರಣ ಅಭಿಯಾನ ಆರಂಭಿಸುತ್ತೇನೆ ಎಂದು ಹೇಳಿದರು.
ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರಾಗಿರುವ ಡಿವಿಎಸ್ ಬದಲಿಗೆ ಈ ಬಾರಿ ಶೋಭಾ ಕರಾಂದ್ಲಾಜೆ ಅವರಿಗೆ ಟಿಕೆಟ್ ನೀಡಿಲಾಗಿದೆ. ಇದರಿಂದ ಡಿವಿಎಸ್ ಅಸಮಾಧಾನಗೊಂಡಿದ್ದರು. ಬಳಿಕ ತನಗೆ ಕಾಂಗ್ರೆಸ್ ನಾಯಕರು ಆಫರ್ ನೀಡಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ನನ್ನನ್ನು ಆರತಿ ಎತ್ತಿ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿದವರು ಕೊನೆಗೆ ಟಿಕೆಟ್ ನೀಡದೆ ಮಂಗಳಾರತಿ ಎತ್ತಿದರು. ಯಾರು ನನ್ನನ್ನು ಅಪಮಾನ ಮಾಡಿದರೋ ಅವರು ಮುಂದೆ ಪಶ್ಚಾತ್ತಾಪಡುತ್ತಾರೆ. ಕೆಲವು ನನಗೆ ನೋವು ಕೊಟ್ಟಿರಬಹುದು. ಆದರೆ, ನಾನು ಒಂದು ಮಾತು ಹೇಳುತ್ತೇನೆ. ಯಾರೇ ಬೇಸರ ಮಾಡಿದರೂ ನಮಗೆ ಅದನ್ನು ಸಹಿಸಿಕೊಳ್ಳಲು ತಾಳ್ಮೆ ಇದ್ದರೆ ದುಃಖ ನೀಡಿದವರು ಇದ್ದೂ ಸತ್ತಂತೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.
ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸದಾನಂದ ಗೌಡರು, ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಶುದ್ಧೀಕರಣ ಅಭಿಯಾನ ಆರಂಭಿಸುವುದಾಗಿ ಹೇಳಿದ್ದಾರೆ.