ಉಡುಪಿ: ತರಗತಿಯಲ್ಲಿ ಹಿಜಾಬ್ ನಿರ್ಬಂಧದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿಯ ಐವರು ವಿದ್ಯಾರ್ಥಿನಿಯರು ನ್ಯಾಯಾಲಯದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ತೀರ್ಪಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು, “ನಾವು ಹಿಜಾಬ್ ತೆಗೆಯುವುದಿಲ್ಲ. ಶಾಲೆಗಳಲ್ಲಿ ನಮಗೆ ಹಿಜಾಬ್ ಧರಿಸುದಕ್ಕೆ ಅವಕಾಶ ನೀಡಬೇಕು. ನಾವು ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗುವುದಿಲ್ಲ” ಎಂದಿದ್ದಾರೆ.
ನ್ಯಾಯಾಂಗದ ಮೇಲೆ ನಮಗೆ ಭರವಸೆಯಿತ್ತು. ಆದರೆ ನಮಗೆ ನ್ಯಾಯ ಸಿಕ್ಕಿಲ್ಲ. ನಮ್ಮ ಹಕ್ಕು ನಮಗೆ ಸಿಕ್ಕಿಲ್ಲ. ನಾವು ಕಾನೂನು ರೀತಿಯಲ್ಲಿ ಎಲ್ಲಾ ಪ್ರಯತ್ನ ಮಾಡುತ್ತೇವೆ. ನಾವು ಹಿಜಾಬ್ ತೆಗೆಯುವುದಿಲ್ಲ. ನಮಗೆ ಹಿಜಾಬ್ ಬೇಕೆಂಬ ಕಾರಣಕ್ಕೆ ನಾವು ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ಹೈಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದಿಲ್ಲ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹಿಜಾಬ್ ಕುರಿತಾಗಿ ‘ಹೈ’ ತೀರ್ಪು: ಮಹತ್ತರ ತೀರ್ಪಿನಲ್ಲಿ ಹೈಕೋರ್ಟ್ ಉಲ್ಲೇಖಿಸಿದ ಅಂಶಗಳೇನು?
“ಕುರಾನ್ ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ. ನಾವು ಹಿಜಾಬ್ ತೆಗೆಯುವುದಿಲ್ಲ, ನಮ್ಮ ಹೋರಾಟ ಮುಂದುವರಿಸುತ್ತೇವೆ. ಸಾಕಷ್ಟು ವಿದ್ಯಾರ್ಥಿನಿಯರು ಹಿಜಾಬ್ ವಿಚಾರದಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ನಮಗೆ ಧರ್ಮ, ಶಿಕ್ಷಣ ಎರಡೂ ಮುಖ್ಯವಾಗಿದೆ. ಪರೀಕ್ಷೆ ಬರೆಯಲು ಸಿದ್ಧರಿದ್ದೇವೆ. ಆದರೆ ಹಿಜಾಬ್ ತೆಗೆಯುವುದಿಲ್ಲ” ಎಂದು ವಿದ್ಯಾರ್ಥಿನಿಯರು ಹೇಳಿದರು.