Advertisement

ಅಪ್ಪು ನಿಧನದ ಹಿನ್ನೆಲೆಯಲ್ಲಿ ಬರ್ತ್‌ಡೇ ಆಚರಿಸಲ್ಲ: ದರ್ಶನ್

12:24 PM Feb 14, 2022 | Team Udayavani |

ಫೆ.16 ನಟ ದರ್ಶನ್‌ ಅವರ ಹುಟ್ಟುಹಬ್ಬ. ಕೋವಿಡ್‌ ಮುಂಚೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ, ಕಳೆದೆರಡು ವರ್ಷಗಳಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ. ಅದು ಈ ವರ್ಷವೂ ಮುಂದುವರೆದಿದೆ. ಈ ವರ್ಷ ಕೂಡಾ ದರ್ಶನ್‌ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸುತ್ತಿಲ್ಲ. ಈ ಕುರಿತು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Advertisement

“ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ನೀವು ಹಬ್ಬದ ತರಹ ಆಚರಿಸ್ತೀರಾ. ಹುಟ್ಟುಹಬ್ಬ ಮಾಡಬೇಕೆಂದು ನನಗೂ ಆಸೆ ಇತ್ತು.ಆದರೆ, ಈ ಬಾರಿಯೂ ಆಚರಿಸುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಪುನೀತ್‌ ರಾಜ್‌ಕುಮಾರ್‌ ಅವರ ನಿಧನ. ಅದು ಆದ ಮೇಲೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳೋದು ಯಾಕೋ ನನ್ನ ಮನಸ್ಸಿಗೆ ಸರಿ ಕಾಣುತ್ತಿಲ್ಲ. ಹಾಗಾಗಿ, ಬರ್ತ್‌ಡೇ ಆಚರಿಸೋದು ಬೇಡ ಎಂದು ನಿರ್ಧರಿಸಿದ್ದೇನೆ. ಖಂಡಿತಾ, ಮುಂದಿನ ವರ್ಷ ಎಲ್ಲರಿಗೂ ಸಿಗುತ್ತೇನೆ. ಈ ಬಾರಿ ನಾನೂ ಊರಲ್ಲಿ ಇರಲ್ಲ. ಆದರೆ, ಅಭಿಮಾನಿಗಳಿಗೆ ಬೇಸರ ಮಾಡಲು ಇಷ್ಟ ಪಡಲ್ಲ. ಇದೇ ಫೆ.18ಕ್ಕೆ ನನ್ನ “ಮೆಜೆಸ್ಟಿಕ್‌’ ಚಿತ್ರ ಬಿಡುಗಡೆಯಾಗುತ್ತಿದೆ. ತಾಂತ್ರಿಕವಾಗಿ ಅಪ್‌ಡೇಟ್‌ ಆಗಿ ಈ ಚಿತ್ರ ತೆರೆಗೆ ಬರುತ್ತಿದೆ. ಜೊತೆಗೆ “ಕ್ರಾಂತಿ’ ಹಾಗೂ ನನ್ನ ಹಾಗೂ ತರುಣ್‌ ಕಾಂಬಿನೇಶನ್‌ ಹೊಸ ಸಿನಿಮಾದ ಅಪ್‌ಡೇಟ್‌ ಕೂಡಾ ಬರಲಿದೆ’ ಎಂದಿದ್ದಾರೆ ದರ್ಶನ್‌.

ಮೆಜೆಸ್ಟಿಕ್‌ ಸಂಭ್ರಮ: ದರ್ಶನ್‌ ಅವರು ಹೀರೋ ಆಗಿ ನಟಿಸಿದ ಮೊದಲ ಚಿತ್ರ “ಮೆಜೆಸ್ಟಿಕ್‌’ ಬಿಡುಗಡೆಯಾಗಿ 20 ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ “ಮೆಜೆಸ್ಟಿಕ್‌’ ಚಿತ್ರದ ಸಂಭ್ರಮ ಆಚರಿಸಿಕೊಂಡಿದೆ. ಈ ಚಿತ್ರಕ್ಕೆ ದುಡಿದ ತಾಂತ್ರಿಕ ವರ್ಗ, ಕಲಾವಿದರು ಎಲ್ಲರನ್ನೂ ಒಟ್ಟು ಸೇರಿಸಿ, ಅವರಿಗೆ ಸ್ಮರಣಿಕೆ ನೀಡಿದೆ. ಪ್ರತಿಯೊಬ್ಬರು “ಮೆಜೆಸ್ಟಿಕ್‌’ ಸಿನಿಮಾಕ್ಕೆ ಕೆಲಸ ಮಾಡಿದ ಅನುಭವ ಹಂಚಿಕೊಂಡರು.

ಇದನ್ನೂ ಓದಿ:ಯುವ ಜೋಡಿಗಳ ಲವ್ಲಿ ಸ್ಟೋರಿ: ‘ಬೈ ಟು ಲವ್‌’ ಟ್ರೇಲರ್‌ ಬಂತು

ನಟ ದರ್ಶನ್‌ ಕೂಡಾ ಮಾತನಾಡಿ, “ಈ ಸಿನಿಮಾಕ್ಕೆ ದರ್ಶನ್‌ನ ನಾನು ಸಜೆಸ್ಟ್‌ ಮಾಡಿದೆ, ಅದು-ಇದು ಎಂಬ ಊಹಾಪೋಹಗಳಿವೆ. ಎಲ್ಲದಕ್ಕೂ ಈಗ ಫುಲ್‌ ಸ್ಟಾಪ್‌ ಇಡೋಕೆ ಬಯಸುತ್ತೇನೆ. ಅದೊಂದು ದಿನ ಅಣಜಿ ನಾಗರಾಜ್‌ ಫೋನ್‌ ಮಾಡಿ, “ಮಧ್ಯಾಹ್ನ ಬ್ರೇಕ್‌ ಟೈಮ್‌ನಲ್ಲಿ ಪ್ರಜ್ವಲ್‌ ಲಾಡ್ಜ್ಗೆ ಹೋಗು ಸತ್ಯ ಇರ್ತಾರೆ’ ಎಂದರು. ಅಲ್ಲೋದೆ, ಸತ್ಯ ಅವರು ಕೂತಿದ್ದರು. ಅವರು, “ದರ್ಶನ್‌ ನಾನು ಈಗಲೇ ಏನೂ ಹೇಳ್ಳೋಕೆ ಆಗಲ್ಲ. ಸಾಯಂಕಾಲ ಬನ್ನಿ’ ಅಂದರು. ಸಾಯಂಕಾಲ ಹೋದಾಗ ಅಲ್ಲಿ, ರಾಂ ಮೂರ್ತಿ, ರಮೇಶ್‌ ಅವರು ಕೂತಿದ್ದರು. ಒಳಗಡೆ ಹೋಗಿ ನನ್ನ ಪರಿಚಯ ಮಾಡಿಕೊಂಡ ಕೂಡಲೇ ರಮೇಶ್‌ ಅವರು “ಇವನೇ ನಮ್ಮ ಹೀರೋ’ ಎಂದರು. ರಮೇಶ್‌ ಅವರು “ಮೆಜೆಸ್ಟಿಕ್‌’ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿ ದ್ದಾರೆ. ಅಲ್ಲಿಂದ ನನ್ನ ಜರ್ನಿ ಶುರುವಾಯಿತು. ನಾನು ಯಾವತ್ತಿಗೂ ಎಂ.ಜಿ. ರಾಮಮೂರ್ತಿ, ರಮೇಶ್‌ ಅವರನ್ನು ಮರೆಯುವಂತಿಲ್ಲ’ ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next