ನವದೆಹಲಿ: ಹೊಸ ಕೃಷಿಮಸೂದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು, ದೆಹಲಿಯ ಬುರಾರಿ ಮೈದಾನದಲ್ಲಿ ತಮ್ಮ ಆಂದೋಲನವನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರ ಮಾಡಿದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಏತನ್ಮಧ್ಯೆ ಡಿಸೆಂಬರ್ 3 ರಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ತಮ್ಮ ಬೇಡಿಕೆಗಳನ್ನು ಚರ್ಚಿಸಲು ಪ್ರತಿಭಟನಾ ನಿರತ ರೈತರಿಗೆ ಕೇಂದ್ರವು ಶನಿವಾರ ತನ್ನ ಆಹ್ವಾನವನ್ನು ನೀಡಿತ್ತು.
“ನಾವು ಎಂದಿಗೂ ಬುರಾರಿ ಮೈದಾನಕ್ಕೆ ತೆರಳುವುದಿಲ್ಲ ಎಂದಿರುವ ರೈತಸಂಘಟನೆಗಳು, ಅದೊಂದು ‘ತೆರೆದ ಜೈಲು’ ಎಂದು ಕಿಡಿಕಾರಿವೆ. ದೆಹಲಿ ಪೊಲೀಸರು ಉತ್ತರಾಖಂಡ ರೈತ ಸಂಘದ ಅಧ್ಯಕ್ಷರಿಗೆ ಜಂತರ್ ಮಂತರ್‌ಗೆ ಕರೆದೊಯ್ಯುವುದಾಗಿ ತಿಳಿಸಿ, ಅವರನ್ನು ಬುರಾರಿ ಪಾರ್ಕ್‌ನಲ್ಲಿ ಲಾಕ್ ಮಾಡಿದ್ದಾರೆ ಎಂದು ಇದೇ ವೇಳೆ ಭಾರತೀಯ ಕಿಸಾನ್ ಯೂನಿಯನ್ ಪಂಜಾಬ್ ಘಟಕದ ಅಧ್ಯಕ್ಷ ಸುರ್ಜೀತ್ ಎಸ್ ಕಿಡಿಕಾರಿದ್ದಾರೆ.
ದೆಹಲಿಯ ಐದು ಮುಖ್ಯ ಪ್ರವೇಶ ದ್ವಾರಗಳನ್ನು ಮುಚ್ಚುವ ಮೂಲಕ ಪ್ರತಿಭಟನೆಯನ್ನು ಮುಂದುವರೆಸಲಿದ್ದೇವೆ. ಈಗಾಗಲೇ ನಾಲ್ಕು ತಿಂಗಳ ಪಡಿತರವನ್ನು ಜೊತೆಗೆ ತಂದಿದ್ದರಿಂದ ಯಾವುದೇ ಚಿಂತಿಸಬೇಕಾದ ಅಗತ್ಯವಿಲ್ಲ. ನಮ್ಮ ಕಾರ್ಯಾಚರಣೆ ಸಮಿತಿ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಸುರ್ಜಿತ್ ತಿಳಿಸಿದರು.
ಇದನ್ನೂ ಓದಿ: ಸರಣಿ ಸೋತರೂ, ಹೊಸ ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ !
ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿರುವ ರೈತಸಂಘಟನೆಗಳು, ನೇರ ಪರಿಹಾರಕ್ಕಾಗಿ ಒತ್ತಾಯಿಸಿದೆ. ಮಾತ್ರವಲ್ಲದೆ ರೈತರಿಗೆ ಯಾವುದೇ ಷರತ್ತುಗಳನ್ನು ಹಾಕುವುದನ್ನು ನಿಲ್ಲಿಸಬೇಕೆಂದು ಕೋರಿಕೊಂಡಿವೆ. ಮಾತುಕತೆಯು ಕೃಷಿ ಮಸೂದೆಗಳ ಬಗ್ಗೆ ರೈತರಿಗೆ ವಿವರಣೆ ಮತ್ತು ಅದು ನೀಡುತ್ತಿರುವ ಪರಿಹಾರದ ಪ್ರಸ್ತಾವನೆಯನ್ನು ಹೊಂದಿರಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಾರ್ಪೋರೇಟರ್ ಹಿತಾಸಕ್ತಿಗಳನ್ನು ಪೂರೈಸಲು, ಚರ್ಚೆ ಇಲ್ಲದೆ ತರಲಾದ 3 ರೈತ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು. ಮತ್ತು ವಿದ್ಯುತ್ ಮಸೂದೆ 2020 ಅನ್ನು ಹಿಂಪಡೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಯುವಕನಿಂದ ಲವ್ ಪ್ರಪೋಸ್; ಒಪ್ಪಿಗೆ ನೀಡಿದಳಾ ಆಸೀಸ್ ಯುವತಿ ? ವಿಡಿಯೋ ವೈರಲ್