Advertisement

Shimoga: ರಾಘವೇಂದ್ರ ವಿರುದ್ಧ ಮಧು ನಿಲ್ತಾರಾ? ಗೀತಾ ಸ್ಪರ್ಧಿಸ್ತಾರಾ?

12:35 AM Jan 17, 2024 | Team Udayavani |

ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಈ ಬಾರಿ ಇನ್ನಷ್ಟು ಕಾವೇರು ವುದು ಖಚಿತ. ಈ ಬಾರಿ ಇದು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇಬ್ಬರಿಗೂ ಪ್ರತಿಷ್ಠೆಯ ಕಣ. 2 ದಶಕಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಂಡಿರುವ ಕಾಂಗ್ರೆಸ್‌ ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.

Advertisement

1999ರವರೆಗೂ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದ ಕಾಂಗ್ರೆಸ್‌ ಪಕ್ಷ 2004ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಬಿಜೆಪಿಗೆ ವಲಸೆ ಹೋದ ಬಳಿಕ ದುರ್ಬಲವಾಯಿತು. ಬಂಗಾರಪ್ಪ 2005ರಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಉಪಚುನಾವಣೆ ಸ್ಪರ್ಧಿಸಿ ಗೆದ್ದರಾದರೂ, ಕಾಂಗ್ರೆಸ್‌ಗೆ ಮತ್ತೆ ಕ್ಷೇತ್ರದಲ್ಲಿ ಹಿಡಿತ ದಕ್ಕಲೇ ಇಲ್ಲ. 2009ರಲ್ಲಿ ಬಂಗಾರಪ್ಪ ವಿರುದ್ಧ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಗೆದ್ದು ಮುನ್ನೆಲೆಗೆ ಬಂದರು. ಸೋತ ಬಂಗಾರಪ್ಪ ರಾಜಕೀಯ ಜೀವನ ಅಂತ್ಯಗೊಂಡರೆ, ಬಿಜೆಪಿಗೆ ಎದುರಾಳಿಯೇ ಇಲ್ಲದಂತಾಯಿತು. 2014ರಲ್ಲಿ ನಟ ಶಿವರಾಜ್‌ಕುಮಾರ್‌ ಪತ್ನಿ ಗೀತಾ ಅವರು ಯಡಿಯೂರಪ್ಪ ವಿರುದ್ಧ ಭಾರೀ ಅಂತರದ ಸೋಲು ಅನುಭವಿಸಿದರು. 2018ರ ಉಪಚುನಾವಣೆ, 2019ರ ಸಾರ್ವತ್ರಿಕ ಚುನಾವಣೆಯಲ್ಲೂ ಬಿಜೆಪಿ ಸೋಲಿಲ್ಲದ ಸರದಾರನಾಯಿತು. ಈ ಎರಡು ಚುನಾವಣೆಗಳಲ್ಲಿ ಹಾಲಿ ಸಚಿವ ಮಧು ಬಂಗಾರಪ್ಪ ಸೋಲುಂಡಿದ್ದರು. ಮಧು ಈಗ ಸೋದರಿ ಗೀತಾಗೆ ಟಿಕೆಟ್‌ ಕೊಡಿಸುವ ಉತ್ಸಾಹದಲ್ಲಿದ್ದಾರೆ.

ರಾಘವೇಂದ್ರಗೆ ಟಿಕೆಟ್‌
ಬಿಜೆಪಿ ಯಿಂದ ರಾಘವೇಂದ್ರಗೆ ಟಿಕೆಟ್‌ ಸಿಗುವುದು ಬಹುತೇಕ ಪಕ್ಕಾ. ಕ್ಷೇತ್ರದಲ್ಲಿ ಬೇರೆ ಯಾರೂ ಆಕಾಂಕ್ಷಿ ಎಂದು ಹೇಳಿಕೊಂಡಿಲ್ಲ. ಅನುದಾನ ಬಳಕೆ, ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ ಕೇಂದ್ರ ಸರಕಾರದಿಂದ ಅತಿ ಹೆಚ್ಚು ಅನುದಾನ ತಂದ ಹೆಗ್ಗಳಿಕೆ, ಸಹೋದರ ವಿಜಯೇಂದ್ರ ರಾಜ್ಯಾಧ್ಯಕ್ಷ ರಾಗಿ ರುವುದು, ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯಲ್ಲಿ ಶಕ್ತಿ ಮೀರಿ ತೊಡಗಿಸಿಕೊಂಡಿರುವುದು, ಯಡಿಯೂರಪ್ಪ ಅವರ ಪುತ್ರ ಎಂಬುದೂ ಸೇರಿದಂತೆ ವಿವಿಧ ಕಾರಣಕ್ಕೆ ಅವರಿಗೆ ಟಿಕೆಟ್‌ ಸಿಗಲಿದೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿದೆ.

ಹಾಲಿ ಸಚಿವ ಮಧು ಬಂಗಾರಪ್ಪಗೆ ಹೈಕಮಾಂಡ್‌ ನಿಲ್ಲಬೇಕು ಎಂದು ಸೂಚಿಸಿದರೆ ಮೂರನೇ ಬಾರಿ ರಾಘವೇಂದ್ರ ಅವರ ಎದುರಾಳಿಯಾಗಲಿದ್ದಾರೆ. 2018ರ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಯಾಗಿ 50,000 ಮತಗಳಿಂದ ಸೋತಿದ್ದರು. 2019ರಲ್ಲಿ 2.26 ಲಕ್ಷ ಮತಗಳಿಂದ ಸೋತಿದ್ದರು. ಹಾಲಿ ಆಕಾಂಕ್ಷಿಗಳ ಬಗ್ಗೆ ಹೈಕಮಾಂಡ್‌ ಒಲವು ಹೊಂದಿಲ್ಲ. ಹೀಗಾಗಿ ಎರಡು ಚುನಾವಣೆ ಮಾಡಿದ ಅನುಭವ ಹೊಂದಿರುವ ಮಧು ಬಂಗಾರಪ್ಪ ಅವರನ್ನೇ ಕೊನೆಕ್ಷಣದಲ್ಲಿ ಕಣಕ್ಕಿಳಿಸಿದರೆ ಆಶ್ಚರ್ಯವಿಲ್ಲ ಎನ್ನಲಾಗಿದೆ.

ಇನ್ನೊಂದೆಡೆ, ಸಹೋದರಿ ಗೀತಾಗೆ ಟಿಕೆಟ್‌ ಕೊಡಿಸಲು ಮಧು ಶ್ರಮ ಹಾಕುತ್ತಿದ್ದಾರೆ. 2013ರಲ್ಲಿ ಜೆಡಿಎಸ್‌ ಶಾಸಕರಾಗಿದ್ದ ಮಧು, 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಕಣಕ್ಕೆ ಇಳಿಸಿದ್ದರು. ಅವರು ಬಿಎಸ್‌ವೈ ಎದುರು ಭಾರೀ ಅಂತರದ ಸೋಲು ಕಂಡಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಮೂರು ಬಾರಿ ಟಿಕೆಟ್‌ ವಂಚಿತರಾಗಿದ್ದು ಸಾಮಾನ್ಯ ಕಾರ್ಯಕರ್ತ ಖೋಟಾದಲ್ಲಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಎನ್‌ಎಸ್‌ಯುಐ, ಯೂತ್‌ ಕಾಂಗ್ರೆಸ್‌, ಜಿಲ್ಲಾಧ್ಯಕ್ಷ ಹುದ್ದೆವರೆಗೂ 35 ವರ್ಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಅವರಿಗೆ 2013, 2018ರ ಲೋಕಸಭೆ ಚುನಾವಣೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗುವ ಭರವಸೆ ಸಿಕ್ಕಿದ್ದರೂ ಕೊನೆ ಕ್ಷಣದಲ್ಲಿ ಕೈತಪ್ಪಿತ್ತು. ಈ ಬಾರಿ ನಾನು ಪ್ರಬಲ ಅಭ್ಯರ್ಥಿ ಎನ್ನುತ್ತಿರುವ ಅವರಿಗೆ ಗೀತಾ ಶಿವರಾಜ್‌ಕುಮಾರ್‌ ಅಡ್ಡಿಯಾಗಿದ್ದಾರೆ. ಇನ್ನು ಮಾಜಿ ಕಿಮ್ಮನೆ ರತ್ನಾಕರ್‌ ಹೆಸರು ಸಹ ಕೇಳಿಬಂದರೂ ಅದು ಅಷ್ಟು ಪ್ರಬಲವಾಗಿಲ್ಲ. ಸತತ ಎರಡು ವಿಧಾನಸಭೆ ಚುನಾವಣೆ ಸೋತಿರುವ ಅವರಿಗೆ ಟಿಕೆಟ್‌ ಕೊಡುವುದು ಅನುಮಾನವೇ. ಅವರು ಸಹ ನಾನು ಆಕಾಂಕ್ಷಿ ಎಂದಿಲ್ಲ. ಕೊಟ್ಟರೆ ಸ್ಪರ್ಧಿಸುವೆ ಎಂದಿದ್ದಾರೆ.

Advertisement

ಮಾಜಿ ಸಿಎಂ ಮಕ್ಕಳಿಗೆ ಮಾತ್ರ ಕಾಂಗ್ರೆಸ್‌ನಲ್ಲಿ ಅಧಿಕಾರ. ಲೋಕಸಭೆಗೆ ನಾನು ಪ್ರಬಲ ಆಕಾಂಕ್ಷಿ ಎಂದು ಹೇಳಿರುವ ಶಾಸಕ ಬೇಳೂರು ಗೋಪಾಲಕೃಷ್ಣ ನಡೆ ಹಲವರ ಹಾದಿಗೆ ಮುಳ್ಳಾಗಿದೆ. ಅವರು ನಿಜವಾಗಿಯೂ ಟಿಕೆಟ್‌ ಆಕಾಂಕ್ಷಿಯೇ ಅಥವಾ ಸಚಿವ- ನಿಗಮ ಸ್ಥಾನದ ಮೇಲೆ ಕಣ್ಣಿಟ್ಟು ದಾಳ ಉರುಳಿಸಿದ್ದಾರೆಯೇ ಎಂಬುದು ಕ್ಷೇತ್ರದಲ್ಲಿ ಬಹುಚರ್ಚಿತ ಸಂಗತಿ.

 ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next