Advertisement

ಮಾತೃತ್ವ ರಜೆ ಮುಗಿಸಿ ಆಫೀಸಿಗೆ ಹೊರಟ್ರಾ?

10:27 AM Jul 12, 2017 | |

ಮಾತೃತ್ವ ರಜೆ ಮುಗಿಸಿ, ಆಫೀಸಿಗೆ ಹೋದಾಗ, ಮನಸ್ಸೆಲ್ಲ ಮನೆಯಲ್ಲಿನ ಮಗುವಿನತ್ತಲೇ ಗಿರಕಿ ಹೊಡೆಯುತ್ತಿರುತ್ತೆ… 

Advertisement

ಮಾತೃತ್ವ ರಜೆ ಮುಗಿಸಿ, ಆರೇಳು ತಿಂಗಳ ನಂತರ ಆಫೀಸಿಗೆ ಕಾಲಿಡ್ತಿದ್ದೀರಿ. ಹೊಸತಾಗಿ ಕೆಲಸಕ್ಕೆ ಸೇರಿದ ಅನುಭವ ನಿಮ್ಮೊಳಗೆ. ಆಫೀಸಿನಲ್ಲಿ ಎಲ್ಲರ ದೃಷ್ಟಿ ನಿಮ್ಮ ಮೇಲೆಯೇ. ಸಹೋದ್ಯೋಗಿ ಗೆಳತಿಯರಂತೂ ನಿಮ್ಮನ್ನು ಮೇಲಿನಿಂದ ಕೆಳಕ್ಕೊಮ್ಮೆ ನೋಡಿರುತ್ತಾರೆ. ನಿಮ್ಮ ಬದಲಾದ ಬಣ್ಣ, ದಪ್ಪ, ತಲೆಕೂದಲು… ಇವೆಲ್ಲದರ ಬಗ್ಗೆಯೂ ಒಂದು ಸುತ್ತಿನ ಮಾತುಕತೆ ಮುಗಿಸಿರುತ್ತಾರೆ. ಆದರೆ, ನಿಮ್ಮ ಗಮನ ಮಾತ್ರ ಅವರೆಲ್ಲರ ಮೇಲಿರೋದಿಲ್ಲ. ಕಾಯ ಮಾತ್ರ ಆಫೀಸಿಗೆ ಬಂದಿದೆ, ಮನಸ್ಸು ಮನೆಯಲ್ಲಿಯೇ ಇದೆಯೆಂಬ ಭಾವ. ಮಾತೃತ್ವ ರಜೆಯ ನಂತರ ಕಾಡುವ ಈ ಸ್ಥಿತಿಯನ್ನು ನಿಭಾಯಿಸುವುದು ಹೇಗೆ?

– ಅತ್ತೆ- ಮಾವ ಮನೆಯಲ್ಲಿಯೇ ಇರ್ತಾರೆ ಅಂದ್ರೆ ನೀವೇ ಅದೃಷ್ಟವಂತರು. ಇಲ್ಲದಿದ್ದರೆ, ಮಗುವನ್ನು ನೋಡಿಕೊಳ್ಳಲು ಯೋಗ್ಯ, ನಂಬಿಕೆಗೆ ಅರ್ಹರನ್ನು ನೇಮಿಸುವ ಹೊಣೆ ನಿಮ್ಮದು. ಮಾತೃತ್ವ ರಜೆಯಲ್ಲಿಯೇ ಅವರನ್ನು ಮನೆಗೆ ಬರಲು ಹೇಳಿ, ಮಗುವಿನ ಆರೈಕೆ ಕುರಿತು, ನಿಮ್ಮ ಕಾಳಜಿಗಳ ಕುರಿತು ಮುಂಚಿತವಾಗಿ ಅವರಿಗೆ ಮನದಟ್ಟು ಮಾಡುವುದು ಮುಖ್ಯ.

– ಮಗುವಿಗೆ ಔಷಧವಿದ್ದರೆ, ವಿಶೇಷವಾಗಿ ತಯಾರಿಸಿದ ಆಹಾರವಿದ್ದರೆ, ಅದನ್ನು ಎಷ್ಟು ಹೊತ್ತಿಗೆ, ಎಷ್ಟು ಸಲ ಕೊಡಬೇಕೆಂಬುದನ್ನು ಮಗುವನ್ನು ಆರೈಕೆ ಮಾಡುವವರಿಗೆ ತಿಳಿಸಿಕೊಡಿ.

– ತಾಯಿಯ ಹೊರತಾಗಿ, ಮಗುವನ್ನು ಇಡೀ ದಿನ ಸಂಭಾಳಿಸುವುದು ಕಷ್ಟದ ಮಾತೇ. ಮಗುವನ್ನು ಹಠ ಮಾಡದಂತೆ ಸುಮ್ಮನೆ ಇರಿಸಲು, ಆಟಿಕೆಗಳನ್ನು ಮನೆಯಲ್ಲಿ ಇಟ್ಟಿರಿ.

Advertisement

– ನೀವು ಬೆಳಗ್ಗೆ ಬೇಗನೆ ಎದ್ದು, ಕಚೇರಿಗೆ ಹೊರಡುವ ಮುನ್ನ ಕನಿಷ್ಠ 5 ಬಾರಿಯಾದರೂ ಮಗುವಿಗೆ ಎದೆಹಾಲುಣಿಸುವುದು ಮುಖ್ಯ.

– ಇದು ಮಳೆಗಾಲವಾದ್ದರಿಂದ, ಮಗುವಿಗೆ ತಣ್ಣೀರಿನ ಉಪಚಾರ ಬೇಡ. ಮಗುವನ್ನು ನೋಡಿಕೊಳ್ಳುವವರಿಗೆ ಆದಷ್ಟು ತುಸು ಬೆಚ್ಚಗಿನ ನೀರನ್ನೇ ಬಳಸಲು ಸೂಚಿಸಿ.

– ಕಚೇರಿಯಲ್ಲಿ ಬಿಡುವಿದ್ದಾಗ, ಕನಿಷ್ಠ 2 ತಾಸಿಗೊಮ್ಮೆ ಮಗುವಿನ ಕ್ಷೇಮ ಸಮಾಚಾರ ತಿಳಿದುಕೊಳ್ಳುವುದು ಉತ್ತಮ.

– ಕಚೇರಿಯ ಕೆಲಸ ಮುಗಿದ ಮೇಲೆ ಸಹೋದ್ಯೋಗಿಗಳೊಂದಿಗೆ ಚರ್ಚೆಗೆ ಕೂರುವುದು, ಹರಟೆಗೆ ನಿಲ್ಲುವುದನ್ನು ಮಾಡಬೇಡಿ.

– ಮಾತೃತ್ವ ರಜೆಯ ನಂತರ ಕಚೇರಿಗೆ ಹೋದಾಗ, ಮನಸ್ಸಿನೊಳಗೆ ಶೂನ್ಯ ಆವರಿಸುತ್ತದೆ. ಹೀಗಾಗದಂತೆ ನೋಡಿಕೊಳ್ಳಲು, ಸಹೋದ್ಯೋಗಿಗಳ ಜತೆಗೆ ಹೆಚ್ಚು ಬೆರೆಯಿರಿ. ಇಲ್ಲವೇ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ.

– ಕಚೇರಿಗೆ ಆದಷ್ಟೇ ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನೇ ಕೊಂಡೊಯ್ಯಿರಿ. ಹೊರಗಿನ ಪದಾರ್ಥವನ್ನು ತಿಂದು, ಆರೋಗ್ಯ ಹೆಚ್ಚುಕಡಿಮೆ ಮಾಡಿಕೊಂಡರೆ, ಮಗುವಿನ ಆರೋಗ್ಯವೂ ಏರುಪೇರಾದಂತೆ ಆಗಬಹುದು.

– ನಿಮ್ಮ ಪತಿಗೂ ನಿಮ್ಮ ಕಚೇರಿಯ, ಮನೆಯ ಹೊಣೆಯ ಬಗ್ಗೆ ಹೇಳಿ, ಮನೆಯ ಕೆಲಸದಲ್ಲಿ ನೆರವಾಗಲು ಕೇಳಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next