ಮುಂಬಯಿ : ರಾಜಕೀಯ ಪಕ್ಷಗಳಿಗೆ ಪುಲ್ವಾಮಾ ಉಗ್ರ ದಾಳಿಯ ಬಗ್ಗೆ ಮಾತನಾಡಲು ಬಿಡದ ಚುನಾವಣಾ ಆಯೋಗವನ್ನು ನಾವು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಎರಡು ದಿನಗಳ ಮಟ್ಟಿಗೆ ಜೈಲಿಗೆ ಹಾಕುತ್ತೇವೆ ಎಂದು ಹೇಳುವ ಮೂಲಕ ದಲಿತ ನಾಯಕ ಮತ್ತು ಮೂರು ಬಾರಿಯ ಸಂಸದ ಪ್ರಕಾಶ್ ಅಂಬೇಡ್ಕರ್ ವಿವಾದಕ್ಕೆ ಸಿಲುಕಿದ್ದಾರೆ.
ಪ್ರಕಾಶ್ ಅಂಬೇಡ್ಕರ್ ಅವರು ಈ ವಿವಾದಾತ್ಮಕ ಮಾತನ್ನು ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ನಡೆದ ರಾಲಿಯಲ್ಲಿನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಂತೆಯೇ ಚುನಾವಣಾ ಆಯೋಗ ಸ್ಥಳೀಯ ಚುನಾವಣಾಧಿಕಾರಿಗಳಿಂದ ಈ ಬಗ್ಗೆ ವರದಿ ಕೇಳಿದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗನಾಗಿರುವ ಪ್ರಕಾಶ್ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಅವರು ತನ್ನ ನೇತೃತ್ವದ ಭಾರಿಪ್ ಬಹುಜನ್ ಮಹಾಸಂಘ ಮತ್ತು ಅಸಾದುದದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದ ಮೈತ್ರಿಯಲ್ಲಿ ರಚಿತವಾಗಿರುವ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ವಿಬಿಎ ಮಹಾರಾಷ್ಟ್ರದ ಎಲ್ಲ 48 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
“ಪುಲ್ವಾಮಾ ಉಗ್ರ ದಾಳಿಯಲ್ಲಿ ನಾವು 40 ಸೈನಿಕರನ್ನು ಕಳೆದುಕೊಂಡಿದ್ದೇವೆ; ಆದರೂ ನಾವು ಸುಮ್ಮನೆ ಕುಳಿತಿದ್ದೇವೆ. ಪುಲ್ವಾಮಾ ಉಗ್ರ ದಾಳಿಯ ಬಗ್ಗೆ ಮಾತನಾಡಬಾರದೆಂದು ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಅಪ್ಪಣೆ ಮಾಡಿದೆ. ಚುನಾವಣಾ ಆಯೋಗ ನಮ್ಮ ಬಾಯಿ ಮುಚ್ಚಿಸುವುದು ಹೇಗೆ ಸಾಧ್ಯ ? ನಮ್ಮ ಸಂವಿಧಾನ ನಮಗೆ ಅಭಿವ್ಯಕ್ತಿ ಹಕ್ಕು ನೀಡಿದೆ. ನಾನು ಬಿಜೆಪಿ ಅಲ್ಲ. ಒಂದೊಮ್ಮೆ ಅಧಿಕಾರಕ್ಕೆ ಬಂದರೆ ನಾವು ಚುನಾವಣಾ ಆಯೋಗವನ್ನು ಎರಡು ದಿನಗಳ ಮಟ್ಟಿಗೆ ಜೈಲಿಗೆ ಹಾಕುತ್ತೇವೆ’ ಎಂದು ಪ್ರಕಾಶ್ ಅಂಬೇಡ್ಕರ್ ಇಂದು ಗುರುವಾರ ರಾಲಿಯಲ್ಲಿ ಹೇಳಿದರು.
ನಿನ್ನೆ ನಾಂದೇಡ್ ನಲ್ಲಿ ನಡೆದಿದ್ದ ಚುನಾವಣಾ ರಾಲಿಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರು “ಒಂದು ವೇಳೆ ನಾವು ಗೆದ್ದು ಅಧಿಕಾರಕ್ಕೆ ಬಂದರೆ ಮೋದಿ ಸರಕಾರ ಅಮಾನ್ಯಗೊಳಿಸಿದ್ದ ನೋಟುಗಳನ್ನು ಮತ್ತೆ ಮಾನ್ಯಗೊಳಿಸುತ್ತೇವೆ’ ಎಂದು ಹೇಳಿದ್ದರು.
ಪ್ರಕಾಶ್ ಅಂಬೇಡ್ಕರ್ ಚುನಾವಣಾ ಆಯೋಗದ ಬಗ್ಗೆ ಏನು ಹೇಳಿದ್ದಾರೆ ಎಂಬ ಬಗ್ಗೆ ನಾವು ಸ್ಥಳೀಯ ಚುನಾವಣಾಧಿಕಾರಿಯಿಂದ ವರದಿ ಕೇಳಿದ್ದೇವೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ದಿಲೀಪ್ ಶಿಂಧೆ ಮಾಧ್ಯಮಕ್ಕೆ ಹೇಳಿದರು.