Advertisement

ಒಳಾಂಗಣ ಕ್ರೀಡಾಂಗಣ ಕಾಮಗಾರಿ ಮುಗಿಯುವುದೆಂದು?

10:43 AM Jun 02, 2018 | Team Udayavani |

ಚಿಂಚೋಳಿ: ಪಟ್ಟಣದ ಚಂದಾಪುರ ನಗರದ ಆಶ್ರಯ ಕಾಲೋನಿ ಬಳಿ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿರುವುದರಿಂದ ಕ್ರೀಡಾಪಟುಗಳಲ್ಲಿ ನಿರಾಶೆ ಮೂಡಿಸಿದೆ.

Advertisement

ಎಚ್‌.ಕೆ.ಆರ್‌.ಡಿ.ಬಿ ವತಿಯಿಂದ 2017-18ನೇ ಸಾಲಿನಲ್ಲಿ ಒಂದು ಎಕರೆ ಜಮೀನು ಪ್ರದೇಶದಲ್ಲಿ ಒಳಾಂಗಣ
ಕ್ರೀಡಾಂಗಣ ನಿರ್ಮಿಸುವುದಕ್ಕಾಗಿ ಶಾಸಕ ಡಾ| ಉಮೇಶ ಜಾಧವ್‌ ಅವರ ಪ್ರಯತ್ನದಿಂದಾಗಿ 2ಕೋಟಿ ರೂ. ಮಂಜೂರಿಯಾಗಿತ್ತು. ಈ ಕಾಮಗಾರಿಯನ್ನು ಕರ್ನಾಟಕ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮಕ್ಕೆ ವಹಿಸಿಕೊಡಲಾಗಿದೆ.

ಕಳೆದ ಒಂದು ವರ್ಷದಿಂದ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕಟ್ಟಡ ಕಾಮಗಾರಿಗೆ ಬಳಸಿರುವ ಸಿಮೆಂಟ್‌ ಕಲ್ಲುಗಳು ಕಳಪೆಮಟ್ಟದಿಂದ ಕೂಡಿವೆ. ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.

ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವ ಹಿಂದುಳಿದ ಪ್ರದೇಶದಲ್ಲಿ ಇರುವ ಕ್ರೀಡಾಪಟುಗಳಿಗೆ ತಮ್ಮ ದೈಹಿಕ ಸಾಮರ್ಥ್ಯ ಮತ್ತು ತರಬೇತಿ ನೀಡಲು ಒಳಾಂಗಣ ಕ್ರೀಡಾಂಗಣದಲ್ಲಿ ಯುವಕ-ಯುವತಿಯರಿಗೆ ಪ್ರತ್ಯೇಕ
ಜಿಮ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಾಗತಕಾರರ ಕೊಠಡಿ, ಕಚೇರಿ, ಕ್ರೀಡಾ ವೀಕ್ಷಣೆಗಾಗಿ ವೀಕ್ಷಕರ ಗ್ಯಾಲರಿ, ಷಟಲ್‌ ಬ್ಯಾಡ್ಮಿಂಟನ್‌ ಮೈದಾನ, ಟೆನ್ನಿಸ್‌ ಆಟಕ್ಕಾಗಿ ವಿಶೇಷ ಅಂಕಣ, ವಾಲಿಬಾಲ್‌ ಹಾಗೂ ಚೆಸ್‌, ಕೇರಂ ಆಡಲು ಕೋಣೆಗಳನ್ನು ನಿರ್ಮಿಸಲಾಗಿದೆ. 

ಪಟ್ಟಣದಲ್ಲಿ ಪೊಲೀಸ್‌ ಪರೇಡ್‌ ಮೈದಾನ ಬಿಟ್ಟು ಬೇರೆ ಯಾವುದೇ ಬಯಲು ಮೈದಾನ ಇಲ್ಲದ ಕಾರಣ ಕ್ರೀಡಾಪಟುಗಳಿಗೆ ಈ ಒಳಾಂಗಣ ಕ್ರೀಡಾಂಗಣ ಉಪಯೋಗವಾಗಲಿದೆ. ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಒಂದೇ ಕಡೆ ಕ್ರೀಡಾಕೂಟ ನಡೆಸಲು ಉಪಯೋಗವಾಗಲಿದೆ.

Advertisement

ಚಂದಾಪುರ ನಗರದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುತ್ತಿರುವುದು ಸಂತೋಷದಾಯಕ. ಶೀಘ್ರವಾಗಿ
ಗುಣಮಟ್ಟದಲ್ಲಿ ಪೂರ್ಣಗೊಳಿಸಿದರೆ ಯುವ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತವೆ. ಕ್ರೀಡಾಪಟುಗಳು ತಮ್ಮ ತಾಲೀಮು ಮಾಡಲು ಅನುಕೂಲವಾಗುತ್ತದೆ. 
 ಭೀಮಶೆಟ್ಟಿ ಜಾಬಶೆಟ್ಟಿ , ಲಾಂಗ್‌ಜಂಪ್‌ ಕ್ರೀಡಾಪಟು

ವಾಲಿಬಾಲ್‌ ಆಡುವುದಕ್ಕೆ ಸ್ಥಳದ ಅಭಾವವಿದೆ. ಒಳಾಂಗಣ ಕ್ರೀಡಾಂಗಣ ಶೀಘ್ರವಾಗಿ ನಿರ್ಮಿಸಿದರೆ ದಿನನಿತ್ಯ ಆಟವಾಡಲು ಅನುಕೂಲವಾಗುವುದು.
 ಸದ್ದಾಂ ಸೌದಾಗರ ಚಿಂಚೋಳಿ, ವಾಲಿಬಾಲ್‌ ಕ್ರೀಡಾಪಟು

ಚಿಂಚೋಳಿ ಪಟ್ಟಣದಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾಂಗಣವೇ ಇಲ್ಲ. ಈಗ ನಿರ್ಮಿಸುತ್ತಿರುವ ಒಳಾಂಗಣ ಕ್ರೀಡಾಂಗಣ ಶೀಘ್ರ ಪೂರ್ಣಗೊಳಿಸಿದರೆ ಯುವ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ .
 ಪ್ರಸಾದ, ಗುವಿವಿ ವಾಲಿಬಾಲ್‌ ಆಟಗಾರ

ಶಾಮರಾವ ಚಿಂಚೋಳಿ 

Advertisement

Udayavani is now on Telegram. Click here to join our channel and stay updated with the latest news.

Next