Advertisement

ಅವಕಾಶ ಸಿಕ್ಕರೆ ಕನ್ನಡದಲ್ಲಿ ಮತ್ತೆ ನಟಿಸುವೆ: ಆರ್ಯ

10:46 AM Sep 17, 2019 | Lakshmi GovindaRaju |

ತಮಿಳು ನಟ ಆರ್ಯ ಈ ಹಿಂದೆ “ರಾಜರಥ’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು ನಿಮಗೆ ನೆನಪಿರಬಹುದು. ಆ ಚಿತ್ರ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ಚಿತ್ರದಲ್ಲಿ ಆರ್ಯ ಅವರ ಪಾತ್ರದ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ಅದಾದ ಬಳಿಕ ಮತ್ತೆ ತಮಿಳಿನಲ್ಲಿ ಬಿಝಿಯಾದ ಆರ್ಯ “ಇರುತ್ತು ಅರೈಯಲ್‌ ಮುರತ್ತುಕುತ್ತು’, “ಘಜಿನಿಕಾಂತ್‌’, “ಮಗಮುನಿ’ ಮೊದಲಾದ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

Advertisement

ಇದರ ನಡುವೆ ಮಲಯಾಳಂನಲ್ಲೂ “ಪತಿನೆತ್ತಮ್‌ ಪಡಿ’ ಚಿತ್ರದಲ್ಲಿ ಮೇಜರ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಸದ್ಯ ತಮಿಳಿನಲ್ಲಿ “ಕಾಪಾನ್‌’, “ಸಂತಾನ ದೇವನ್‌’ ಸೇರಿದಂತೆ ಮೂರ್‍ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಆರ್ಯ, ಅವಕಾಶ ಸಿಕ್ಕರೆ ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. “ಕನ್ನಡ ಚಿತ್ರರಂಗ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ವರ್ಷದಿಂದ ವರ್ಷಕ್ಕೆ ಹೊಸಥರದ ಚಿತ್ರಗಳು ಬರುತ್ತಿವೆ.

ನನಗೆ ತಿಳಿದಂತೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಹೊಸಬರು ಕನ್ನಡ ಚಿತ್ರರಂಗದಿಂದ ಬರುತ್ತಿದ್ದಾರೆ. ಇಲ್ಲಿ ಹೊಸ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಮತ್ತು ತಂತ್ರಜ್ಞರಿಗೆ ಕನ್ನಡದಲ್ಲಿ ಸಾಕಷ್ಟು ಅವಕಾಶಗಳಿವೆ’ ಎಂದಿರುವ ಆರ್ಯ, “ನಾನೊಬ್ಬ ಕಲಾವಿದನಾಗಿ ಯಾವಾಗಲೂ ಹೊಸಥರದ ಮತ್ತು ಒಳ್ಳೆಯ ಪಾತ್ರಗಳನ್ನು ಎದುರು ನೋಡುತ್ತಿರುತ್ತೇನೆ. ಕನ್ನಡದಲ್ಲಿ ಈ ಹಿಂದೆ ಒಳ್ಳೆಯ ಪಾತ್ರ ಸಿಕ್ಕಿತ್ತು. ಅದನ್ನು ಖುಷಿಯಿಂದ ನಿರ್ವಹಿಸಿದ್ದೆ. ಮುಂದೆಯೂ ನನಗೆ ಒಪ್ಪುವಂಥ ಪಾತ್ರಗಳು ಸಿಕ್ಕರೆ ಕನ್ನಡದಲ್ಲಿ ಮತ್ತೆ ಅಭಿನಯಿಸುವ ಆಸೆ ಇದೆ’ ಎಂದಿದ್ದಾರೆ.

ಅಂದಹಾಗೆ, ಆರ್ಯ ತಮ್ಮ ಮನದಾಸೆಯನ್ನು ಹಂಚಿಕೊಳ್ಳಲು ಕಾರಣವಾಗಿದ್ದು, “ಒಂಬತ್ತನೇ ದಿಕ್ಕು’ ಚಿತ್ರದ ಮುಹೂರ್ತ ಸಮಾರಂಭ. ಇತ್ತೀಚೆಗೆ ನಡೆದ ನಟ ಲೂಸ್‌ಮಾದ ಯೋಗಿ ಅಭಿನಯದ ಮುಂಬರುವ ಚಿತ್ರ “ಒಂಬತ್ತನೇ ದಿಕ್ಕು’ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರ್ಯ, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಬಳಿಕ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತಿಗಿಳಿದ ಆರ್ಯ ಇಂಥದ್ದೊಂದು ಆಸೆಯನ್ನು ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next