Advertisement

ಗೇಮ್‌ ಚೇಂಜರ್‌ ಆಗುತ್ತಾ ಎಫ್‌ಎಂಸಿಜಿ ಕ್ಲಸ್ಟರ್‌?

10:41 AM Mar 28, 2022 | Team Udayavani |

ಹುಬ್ಬಳ್ಳಿ: ರಾಜ್ಯದ ಮೊದಲ ಎಫ್‌ಎಂಸಿಜಿ ಕ್ಲಸ್ಟರ್‌ಗಿದ್ದ ಅಡೆತಡೆ ಬಹುತೇಕ ನಿವಾರಣೆಯಾಗಿದೆ. ಉದ್ಯೋಗ, ಆರ್ಥಿಕ ವಹಿವಾಟು, ಜಿಡಿಪಿ ಬೆಳವಣಿಗೆ, ಉದ್ಯಮ ನೆಗೆತ ದೃಷ್ಟಿಯಿಂದ ಇದು ಗೇಮ್‌ ಚೇಂಜರ್‌ ಪಾತ್ರ ವಹಿಸಲಿದ್ದು, ಈ ಮಹತ್ವದ ಹೆಜ್ಜೆ ಗುರುತು ಸಾಧನೆಗೆ ಹುಬ್ಬಳ್ಳಿ-ಧಾರವಾಡ ವೇದಿಕೆ ಆಗುತ್ತಿದೆ.

Advertisement

ಹಿಮಾಚಲ ಪ್ರದೇಶ ಸೇರಿದಂತೆ ಈಶಾನ್ಯ ಹಾಗೂ ಉತ್ತರದ ರಾಜ್ಯಗಳಲ್ಲಿ ನೆಲೆಯೂರಿದ್ದ ಎಫ್‌ಎಂಸಿಜಿ ಕ್ಲಸ್ಟರ್‌ ದಕ್ಷಿಣ ಕಡೆ ಹೆಜ್ಜೆ ಇರಿಸಲು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಮಹತ್ವದ ಕ್ರಮಗಳ ಮೂಲಕ ದೇಶದ ಗಮನ ಸೆಳೆದಿದೆ.

ಎಫ್‌ಎಂಸಿಜಿ ವಿಜನ್‌ ಗ್ರೂಪ್‌ ರಚನೆ, 2022-23ನೇ ಸಾಲಿನ ಆಯವ್ಯಯದಲ್ಲಿ ಕ್ಲಸ್ಟರ್‌ ರಚನೆ ಘೋಷಣೆ, ಕ್ಲಸ್ಟರ್‌ ಕಡತಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ಮೂಲಕ ರಾಜ್ಯದ ಮೊದಲ ಕ್ಲಸ್ಟರ್‌ ಹಾಗೂ ದಕ್ಷಿಣ ಭಾರತದಲ್ಲೇ ಗಮನಾರ್ಹ ಸಾಧನೆಗೆ ಕರ್ನಾಟಕ ಮುಂದಾಗಿದೆ.

ಉತ್ತಮ ಭವಿಷ್ಯ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆ, ಗ್ರಾಮೀಣ ಭಾಗದಲ್ಲಿ ವೃದ್ಧಿಸುತ್ತಿರುವ ಎಫ್‌ಎಂಸಿಜಿ ಉತ್ಪನ್ನಗಳು, ಶೇ.100 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ಇನ್ನಿತರೆ ಅಂಶಗಳು ಎಫ್‌ಎಂಸಿಜಿ ಉದ್ಯಮ ನೆಗೆತಕ್ಕೆ ಮತ್ತಷ್ಟು ಬಲ ತುಂಬ ತೊಡಗಿವೆ. ಇದರಿಂದ ಉದ್ಯಮ ಬೆಳವಣಿಗೆ, ಉದ್ಯೋಗ ಸೃಷ್ಟಿ ಹೆಚ್ಚಲಿದೆ.

ದೇಶದ ಗ್ರಾಮೀಣ ಪ್ರದೇಶದಲ್ಲಿ 2025ರ ವೇಳೆಗೆ ಎಫ್‌ಎಂಸಿಜಿ ಮಾರ್ಕೆಟ್‌ ಶೇ.14.9 ನೆಗೆತ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ಪ್ಯಾಕ್ಡ್ಫುಡ್‌ ಮಾರ್ಕೆಟ್‌ ದುಪ್ಪಟ್ಟು ಆಗಲಿದ್ದು, 2025ರ ವೇಳೆಗೆ 70 ಬಿಲಿಯನ್‌ ಡಾಲರ್‌ ವಹಿವಾಟು ನಡೆಸುವ ಸಾಧ್ಯತೆ ಇದೆ. 2017ರಲ್ಲಿ 840 ಬಿಲಿಯನ್‌ ಡಾಲರ್‌ ಇದ್ದ ದೇಶದ ರಿಟೇಲ್‌ ವಹಿವಾಟು 2020ರ ವೇಳೆಗೆ 1.1 ಟ್ರಿಲಿಯನ್‌ ಡಾಲರ್‌ಗೆ ತಲುಪಿದ್ದು, ವಾರ್ಷಿಕವಾಗಿ ಶೇ.20-25 ವೃದ್ಧಿಯಾಗುತ್ತಿದೆ.

Advertisement

ಕ್ರಮ ಅವಶ್ಯ: ರಾಜ್ಯದ ಮೊದಲ ಎಫ್‌ಎಂಸಿಜಿ ಕ್ಲಸ್ಟರ್‌ ರಚನೆ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ಮಹತ್ವದ ಹೆಜ್ಜೆಗಳನ್ನಿರಿಸಿದೆ. ಆದರೂ ಇಂದಿನ ಪೈಪೋಟಿ ಸ್ಥಿತಿಯಲ್ಲಿ ಯಾವುದಕ್ಕೂ ಉದಾಸೀನ, ವಿಳಂಬ ತೋರುವ ಬದಲು ತ್ವರಿತ ಕ್ರಮಕ್ಕೆ ಮುಂದಾಗಬೇಕಿದೆ. ಸ್ವಲ್ಪ ವಿಳಂಬ ತೋರಿದರೂ ಇನ್ನೊಂದು ರಾಜ್ಯ ಅದನ್ನು ತನ್ನದಾಗಿಸಿಕೊಳ್ಳುವ ಸನ್ನಿವೇಶ ಇಲ್ಲದಿಲ್ಲ.

ಹಿಮಾಚಲ ಪ್ರದೇಶ ಇನ್ನಿತರೆ ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿದ್ದ ಎಫ್‌ಎಂಸಿಜಿ ಕ್ಲಸ್ಟರ್‌ ದಕ್ಷಿಣ ಭಾರತ ಕಡೆ ಮುಖ ಮಾಡಿದ್ದು, ಕರ್ನಾಟಕ, ಕೇರಳ ಇನ್ನಿತರೆ ರಾಜ್ಯಗಳು ಮುಂದಾಗಿವೆ. ಕೇರಳದ ಪಲಕ್ಕಾಡ್‌ನ‌ಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ ಉದ್ದೇಶದೊಂದಿಗೆ ಸುಮಾರು 300-500 ಹೆಕ್ಟೇರ್‌ ಭೂಮಿ ಗುರುತಿಸಲಾಗಿದ್ದು, ವಿವಿಧ ಸೌಲಭ್ಯ-ರಿಯಾಯಿತಿ ಭರವಸೆ ನೀಡಲಾಗಿದೆ.

ಪಲಕ್ಕಾಡ್‌ ಕೇರಳದ ಮಧ್ಯ ಭಾಗದ ಪ್ರದೇಶವಾಗಿದ್ದು, ಕರ್ನಾಟಕ-ತಮಿಳುನಾಡು ರಾಜ್ಯಗಳ ವ್ಯಾಪಾರ-ವಹಿವಾಟಿಗೂ ಸುಲಭವಾ ಗಲಿದೆ ಎಂಬುದು ಕೇರಳ ಸರಕಾರದ ಲೆಕ್ಕಾಚಾರವಾಗಿದೆ. ಕರ್ನಾಟಕ ಸರಕಾರ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ರಚನೆಗೆ ಮುಂದಡಿ ಇರಿಸಿದ್ದು, ಈ ನಿಟ್ಟಿನಲ್ಲಿ ವಿಳಂಬಕ್ಕೆ ಅವಕಾಶ ನೀಡದ ರೀತಿಯಲ್ಲಿ ಅಗತ್ಯ ಮೂಲಸೌಕರ್ಯ, ಉದ್ಯಮ ಆಕರ್ಷಣೆ ಯೋಜನೆಗಳ ಕ್ರಮ ಕೈಗೊಳ್ಳಬೇಕಾಗಿದೆ.

ಚಿತ್ರಣ ಬದಲು?: ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ರಚನೆಗೆ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಇನ್ನಿತರೆ ಸಂಸ್ಥೆಗಳು ತಮ್ಮದೇ ಪ್ರಭಾವ-ಪಾತ್ರ ವಹಿಸಿವೆ. ಖ್ಯಾತ “ಜ್ಯೋತಿ ಲ್ಯಾಬೊರೇಟರೀಸ್‌ ‘(ಉಜಾಲಾ)ನ ಉಲ್ಲಾಸ ಕಾಮತ್‌ ಅವರ ಅಧ್ಯಕ್ಷತೆಯಲ್ಲಿ ಎಫ್‌ಎಂಸಿಜಿ ವಿಜನ್‌ ಗ್ರೂಪ್‌ ರಚಿಸಲಾಗಿತ್ತು.

ಇದು ವಿವಿಧ ಶಿಫಾರಸುಗಳ ಸಮಗ್ರ ವರದಿ ನೀಡಿತ್ತು. ರಾಜ್ಯ ಸರಕಾರದ ನೂತನ ಕೈಗಾರಿಕಾ ನೀತಿ 2020-25ರಲ್ಲಿ ಇದಕ್ಕೆ ಪೂರಕ ಅಂಶಗಳನ್ನು ರೂಪಿಸಲಾಗಿತ್ತು. ಎಫ್‌ಎಂಸಿಜಿ ಕ್ಲಸ್ಟರ್‌ಗಾಗಿ ಧಾರವಾಡದ ಮುಮ್ಮಿಗಟ್ಟಿಯಲ್ಲಿ ಸುಮಾರು 200 ಎಕರೆ ಭೂಮಿ ಮೀಸಲಿರಿಸಲಾಗಿದೆ. ಆಯವ್ಯಯದಲ್ಲಿ ಕ್ಲಸ್ಟರ್‌ ಘೋಷಿಸಿದ್ದು ದೊಡ್ಡ ನೆಗೆತ ಕಂಡಿತ್ತಾದರೂ, ಕಡತಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಯೋಜನೆ ಮುಂದಡಿ ಸಾಧ್ಯವಾಗದಾಗಿತ್ತು. ಇದೀಗ ಆರ್ಥಿಕ ಇಲಾಖೆ ಕಡತಕ್ಕೆ ಒಪ್ಪಿಗೆ ನೀಡಿದ್ದು, ನಿರೀಕ್ಷೆ ಇನ್ನಷ್ಟು ಗರಿಗೆದರಿದೆ. ಕ್ಲಸ್ಟರ್‌ ನಿಂದ ಈ ಭಾಗದ ಉದ್ಯಮ ವಲಯದಲ್ಲಿ ದೊಡ್ಡ ಬೆಳವಣಿಗೆ ಕಾಣಲಿದ್ದು, ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಮಹತ್ವದ ನೆಗೆತ ಕಾಣಲಿದೆ.

ಬಹುತೇಕ ಒಪ್ಪಿಗೆ? ಹುಬ್ಬಳ್ಳಿ-ಧಾರವಾಡದ ಎಫ್‌ಎಂಸಿಜಿ ಕ್ಲಸ್ಟರ್‌ಗೆ ಸಂಬಂಧಿಸಿದಂತೆ ಹಲವು ಉದ್ಯಮಗಳು ವಿವಿಧ ಸೌಲಭ್ಯ, ಸಬ್ಸಿಡಿಯ ಮನವಿ ಮಾಡಿದ್ದವು. ಇದೇ ಕಾರಣಕ್ಕೆ ಆರ್ಥಿಕ ಇಲಾಖೆ ಕಡತಕ್ಕೆ ಮೋಕ್ಷ ನೀಡದೆ ಚೌಕಾಸಿಗೆ ಮುಂದಾಗಿತ್ತು ಎನ್ನಲಾಗಿದೆ. ಉದ್ಯಮ ಆರಂಭಕ್ಕೆ ಮೂಲಸೌಲಭ್ಯಗಳ ಜತೆಗೆ ಶೇ.6 ಸಬ್ಸಿಡಿ-ರಿಯಾಯಿತಿಗೆ ಮನವಿ ಮಾಡಲಾಗಿತ್ತು. ಇದು ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಇದೀಗ ಸರಕಾರ ಶೇ.4ರಷ್ಟು ಸಬ್ಸಿಡಿ, ರಿಯಾಯಿತಿ ನೀಡಲು ಒಪ್ಪಿಗೆ ನೀಡಿದೆ. ಸರಕಾರದ ಈ ನಿರ್ಧಾರಕ್ಕೆ ಎಫ್‌ಎಂಸಿಜಿ ಉದ್ಯಮ ಬಹುತೇಕ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

ಶೆಟ್ಟರ-ಜೋಶಿ ಯತ್ನ ಸಿಎಂ-ನಿರಾಣಿ ಸಾಥ್‌!

ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ರಚನೆ ಯತ್ನ ಕಳೆದ ಎರಡ್ಮೂರು ವರ್ಷಗಳಿಂದ ನಡೆಯುತ್ತಿದೆ. ಕೈಗಾರಿಕಾ ಸಚಿವರಾಗಿದ್ದ ಜಗದೀಶ ಶೆಟ್ಟರ ಅವರು ಈ ನಿಟ್ಟಿನಲ್ಲಿ ತೀವ್ರ ಯತ್ನ ಕೈಗೊಂಡಿದ್ದರು. ಉಲ್ಲಾಸ ಕಾಮತ್‌ ನೇತೃತ್ವದ ಸಮಿತಿ ರಚಿಸಿ ವರದಿ ಪಡೆದಿದ್ದು, ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರವೂ ತಮ್ಮ ಯತ್ನ ಮುಂದುವರಿಸಿದ್ದ ಅವರು ಕಡತ ಅನುಮೋದನೆಗೆ ನಿರಂತರ ಯತ್ನ ನಡೆಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಹ ಕ್ಲಸ್ಟರ್‌ ಆರಂಭಕ್ಕೆ ತಮ್ಮದೇ ಶ್ರಮ ಹಾಕಿದ್ದಾರೆ. ಇದರ ಮುಂದುವರಿದ ಭಾಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯವ್ಯಯದಲ್ಲಿ ಕ್ಲಸ್ಟರ್‌ ಘೋಷಣೆ ಮೂಲಕ ಮಹತ್ವದ ನೆಗೆತಕ್ಕೆ ಕಾರಣವಾಗಿದ್ದರು. ಆರ್ಥಿಕ ಇಲಾಖೆಯಿಂದ ಕಡತ ಮೋಕ್ಷಕ್ಕೆ ಯತ್ನ ಹಾಗೂ ಮುಂದಿನ ದಿನಗಳಲ್ಲಿ ಉದ್ಯಮ ಆರಂಭಕ್ಕೆ ಪೂರಕ ವಾತಾವರಣ ಸೃಷ್ಟಿ ನಿಟ್ಟಿನಲ್ಲಿ ಸಚಿವ ಮುರುಗೇಶ ನಿರಾಣಿ ಮಹತ್ವದ ಪಾತ್ರ ವಹಿಸಿದ್ದಾರೆ.

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next