ಕಲಬುರಗಿ: ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಸಂಪ್ರದಾಯ, ಅದು ನಮ್ಮ ಹಕ್ಕು. ಅದನ್ನು ತಡೆಯುವವರು ಯಾರು? ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಫಾತೀಮಾ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಹಿಜಾಬ್ ವಿರೋಧಿಸುವುದನ್ನು ಖಂಡಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಹೋಗಿದ್ದಕ್ಕೆ ತಡೆದು ಹೊರಗಡೆ ಕೂಡಿಸಲಾಗಿದೆ. ಹಿಜಾಬ್ ನಾವು ಮೊದಲಿನಿಂದಲೂ ಧರಿಸುತ್ತಿದ್ದೇವೆ. ಈಗ ಹೊಸದಾಗಿ ಹಿಜಾಬ್ ಧರಿಸುತ್ತಿಲ್ಲ. ನಾನು ಕೂಡ ವಿಧಾನಸಭೆಗೆ ಹಿಜಾಬ್ ಧರಿಸಿಯೇ ಹೋಗಿದ್ದೇನೆ. ಮುಂದೆಯೂ ಹಿಜಾಬ್ ಧರಿಸಿಯೇ ಹೋಗುತ್ತೇನೆ. ಧೈರ್ಯವಿದ್ದರೆ ನನ್ನನ್ನು ತಡೆಯಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಅಭಿವೃದ್ಧಿಯಾಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಸಾಧ್ಯವಾದರೆ ನಾನು ಉಡುಪಿಗೆ ಹೋಗಿ ವಿದ್ಯಾರ್ಥಿನಿಯರ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಎಂದರು.
ಶಾಸಕಿ ಖನೀಜ್ ಫಾತೀಮಾ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಿಜಾಬ್ ಮುಂದುವರಿಸಲು ಒತ್ತಾಯಿಸಿದರು. ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಲು ಅವಕಾಶ ನೀಡಬೇಕೆಂದು ಶಿಕ್ಷಣ ಸಚಿವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗೆ ಪ್ರತಿಭಟನಾಕಾರರು ಸಲ್ಲಿಸಿದರು.