ಅಯೋಧ್ಯೆ: ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸ್ವಾಮೀಜಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ಸ್ವಾಮೀಜಿ ಆಗಿರುವ ಪರಮಹಂಸ ಆಚಾರ್ಯ ಎನ್ನುವವರು ಸ್ಟಾಲಿನ್ ನೀಡಿರುವ ಸನಾತನ ಧರ್ಮದ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಎಂಕೆ ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ “ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಸನಾತನವನ್ನು ವಿರೋಧಿಸುವುದಕ್ಕಿಂತ, ಅದನ್ನು ನಾವು ನಿರ್ಮೂಲನೆ ಮಾಡಬೇಕು ಎಂದು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಹೇಳಿದ್ದರು.
ಈ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಕಟುವಾಗಿ ಟೀಕಿಸಿದ್ದಾರೆ. ಅನೇಕರು ಉದಯನಿಧಿ ಸ್ಟಾಲಿನ್ ಬಂಧನಕ್ಕೆ ಆಗ್ರಹಿಸಿದ್ದಾರೆ.
ಈ ನಡುವೆ ಸ್ವಾಮೀಜಿಯೊಬ್ಬರು ಉದಯ ಸ್ಟಾಲಿನ್ ಅವರ ತಲೆಗೆ 10 ಕೋಟಿ ರೂ. ಘೋಷಿಸಿದ್ದಾರೆ. ಈ ಕುರಿತು ವಿಡಿಯೋ ರಿಲೀಸ್ ಮಾಡಿರುವ ಪರಮಹಂಸ ಆಚಾರ್ಯ ಒಂದು ಕೈಯಲ್ಲಿ ಉದಯನಿಧಿಯ ಪೋಸ್ಟರ್ ಮತ್ತು ಇನ್ನೊಂದು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಡಿಎಂಕೆ ಸಚಿವರ ಸಾಂಕೇತಿಕ ಶಿರಚ್ಛೇದವನ್ನು ಪ್ರದರ್ಶಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ಗೆ ಬೆಂಕಿ ಹಚ್ಚುವ ದೃಶ್ಯವೂ ಕಂಡು ಬಂದಿದೆ. ಡಿಎಂಕೆ ನಾಯಕನ ತಲೆ ಕಡಿಯುವವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಉದಯನಿಧಿ ಸ್ಟಾಲಿನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಇಂದು ಸ್ವಾಮಿಯೊಬ್ಬರು ನನ್ನ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅವನು ನಿಜವಾದ ಸಂತನೋ ಅಥವಾ ನಕಲಿಯೋ? ನಿನಗೇಕೆ ನನ್ನ ತಲೆ ತುಂಬಾ ಇಷ್ಟ? ನಿಮಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ನನ್ನ ಕೂದಲು ಬಾಚಲು 10 ಕೋಟಿ ಏಕೆ ಘೋಷಿಸುತ್ತಿದ್ದೀರಿ? ನೀವು 10 ರೂಪಾಯಿ ಬಾಚಣಿಗೆ ಕೊಟ್ಟರೆ ನಾನೇ ಮಾಡುತ್ತೇನೆ” ಎಂದಿದ್ದಾರೆ.