Advertisement

ಮಾನವಕುಲಕ್ಕೆ ಕಂಟಕವಾಗಲಿದೆಯೇ ಶಿಥಿಲ ಅಣೆಕಟ್ಟುಗಳು?

01:31 AM Jan 25, 2021 | Team Udayavani |

ನ್ಯೂಯಾರ್ಕ್‌: “ಇನ್ನು ನಾಲ್ಕು ವರ್ಷಗಳಲ್ಲಿ ಭಾರತದ ಸಾವಿರಕ್ಕೂ ಅಧಿಕ ಅಣೆಕಟ್ಟುಗಳಿಗೆ 50 ವರ್ಷಗಳು ತುಂಬಲಿದ್ದು, ಇವುಗಳೇನಾದರೂ ಕುಸಿದುಬಿದ್ದರೆ ಭಾರೀ ಪ್ರಮಾಣದ ಜೀವಹಾನಿ ಖಚಿತ.’

Advertisement

ಇಂಥದ್ದೊಂದು ಎಚ್ಚರಿಕೆಯ ಸಂದೇಶ ನೀಡಿರುವುದು ವಿಶ್ವಸಂಸ್ಥೆ. ಜಗತ್ತಿನಾದ್ಯಂತ ಬಾಳಿಕೆಯ ಅವಧಿ ಪೂರ್ಣಗೊಳ್ಳುತ್ತಿರುವ ಸಾವಿರಾರು ಅಣೆಕಟ್ಟುಗಳಿದ್ದು, ಇವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಶ್ವಸಂಸ್ಥೆಯ ವಿವಿಯೊಂದರ ವರದಿ ಹೇಳಿದೆ.

ಜಗತ್ತಿನಲ್ಲಿರುವ 58,700 ಬೃಹತ್‌ ಅಣೆಕಟ್ಟುಗಳ ಪೈಕಿ ಬಹುತೇಕ ಡ್ಯಾಂಗಳನ್ನು 1930ರಿಂದ 1970ರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಇವುಗಳ ಬಾಳಿಕೆ 50-100 ವರ್ಷಗಳು. 20ನೇ ಶತಮಾನದಲ್ಲಿ ಸಾವಿರಾರು ಡ್ಯಾಂಗಳು ನಿರ್ಮಾಣವಾಗಿದ್ದು, 2050ರ ವೇಳೆಗೆ ಇವುಗಳಿಗೇನಾದರೂ ಹಾನಿಯಾದರೆ, ಲಕ್ಷಾಂತರ ಜನರು ಜಲಸಮಾಧಿಯಾಗುವ ಆತಂಕವಿದೆ ಎಂದಿದೆ ವರದಿ.

ಅಮೆರಿಕ, ಫ್ರಾನ್ಸ್‌, ಕೆನಡಾ, ಭಾರತ, ಜಪಾನ್‌, ಝಾಂಬಿಯಾ, ಜಿಂಬಾಬ್ವೆಯ­ಲ್ಲಿನ ಅಣೆಕಟ್ಟುಗಳನ್ನು ಅಧ್ಯಯನ ಮಾಡಿ ಈ ವರದಿ ತಯಾರಿಸಲಾಗಿದೆ. ಜಲಸಂಗ್ರಹ ಮೂಲಸೌಕರ್ಯಗಳು ಶಿಥಿಲಗೊಳ್ಳುತ್ತಿರುವ ಬಗ್ಗೆ ದೇಶಗಳ ಗಮನ ಸೆಳೆಯುವುದು ಮತ್ತು ಈ ಜಲ ಕಂಟಕವನ್ನು ಸಮರ್ಥವಾಗಿ ನಿಭಾಯಿಸಲು ಪ್ರೇರೇಪಿ­ಸುವುದೇ ಈ ವರದಿಯ ಉದ್ದೇಶ ಎಂದು ಹೇಳಲಾಗಿದೆ.

ಶಿಥಿಲಗೊಳ್ಳುತ್ತಿರುವ ಲಕ್ಷಣಗಳು :

Advertisement

50 ವರ್ಷಗಳು ತುಂಬುತ್ತಿರುವಂತೆ ಕಾಂಕ್ರೀಟ್‌ ಅಣೆಕಟ್ಟುಗಳು ಶಿಥಿಲಗೊಳ್ಳುವ ಲಕ್ಷಣಗಳನ್ನು ತೋರಿಸುತ್ತಿರುತ್ತವೆ. ಅಂದರೆ ಆಗಾಗ್ಗೆ ಅಣೆಕಟ್ಟುಗಳಲ್ಲಿ ಸಮಸ್ಯೆ ತಲೆದೋರುವುದು, ರಿಪೇರಿ ಹಾಗೂ ನಿರ್ವಹಣೆಗೆ ಬರುವುದು, ಜಲಾಶಯದ ಸಂಚಯದಲ್ಲಿ ಹೆಚ್ಚಳ, ಡ್ಯಾಂನ ಕಾರ್ಯ­ಕ್ಷಮತೆ ಮತ್ತು ಪರಿಣಾಮಕತ್ವ ಕುಗ್ಗುವುದು ಇತ್ಯಾದಿಗಳು “ಅಣೆಕಟ್ಟಿಗೆ ವಯಸ್ಸಾಗಿದೆ ಎಂಬುದರ ಸೂಚಕವಾಗಿವೆ.

ಮುಲ್ಲಪೆರಿಯಾರ್‌ ಆತಂಕ :

ಸುಮಾರು 100 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಕೇರಳದ ಮುಲ್ಲಪೆರಿಯಾರ್‌ ಅಣೆಕಟ್ಟು ಏನಾದರೂ ಕುಸಿದುಬಿದ್ದರೆ, 35 ಲಕ್ಷಕ್ಕೂ ಅಧಿಕ ಮಂದಿಯ ಜೀವಕ್ಕೆ ಅಪಾಯ ಖಚಿತ ಎಂದು ವರದಿ ಎಚ್ಚರಿಸಿದೆ. ಈ ಅಣೆಕಟ್ಟು ಸಕ್ರಿಯ ಭೂಕಂಪನ ಪ್ರದೇಶದಲ್ಲಿದ್ದು, ಈಗಾಗಲೇ ರಚನಾತ್ಮಕ ಹಾನಿಯನ್ನೂ ಎದುರಿಸುತ್ತಿದೆ. ಅಲ್ಲದೆ ಅದರ ನಿರ್ವಹಣೆಯ ವಿಚಾರದಲ್ಲಿ ತಮಿಳುನಾಡು ಮತ್ತು ಕೇರಳದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ ಎಂದೂ ಉಲ್ಲೇಖೀಸಲಾಗಿದೆ.

ಜಗತ್ತಿನಲ್ಲಿರುವ ಬೃಹತ್‌  ಅಣೆಕಟ್ಟುಗಳ ಸಂಖ್ಯೆ :  58,700

ಚೀನ, ಭಾರತ, ಜಪಾನ್‌ ದ.ಕೊರಿಯಾ  ಡ್ಯಾಂಗಳು : 32,716

2050ರಲ್ಲಿ 50 ವರ್ಷ  ತುಂಬುವಂಥದ್ದು : 4,250

ಈ ಪೈಕಿ ಅತ್ಯಧಿಕ ಅಣೆಕಟ್ಟುಗಳಿರುವ ದೇಶಗಳು : 4

2025ರಲ್ಲಿ 50 ವರ್ಷ ತುಂಬುವ ಭಾರತದ ಬೃಹತ್‌ ಡ್ಯಾಂಗಳು : 1,115

2050ರಲ್ಲಿ 150 ವರ್ಷಗಳಷ್ಟು ಹಳೆಯದಾಗುವ ಡ್ಯಾಂಗಳು : 6

Advertisement

Udayavani is now on Telegram. Click here to join our channel and stay updated with the latest news.

Next