ಹೈದರಾಬಾದ್: ತೆಲಂಗಾಣದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದರೆ, ಅದು ನಿಜಾಮರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೊಸದಾಗಿ ನಿರ್ಮಿಸಲಾದ ರಾಜ್ಯ ಸಚಿವಾಲಯದ ಗುಮ್ಮಟಗಳನ್ನು ಕೆಡವಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಶುಕ್ರವಾರ ಘೋಷಿಸಿದ್ದಾರೆ.
ಕುಕಟ್ಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೇ ಬೋಯಿನಪಲ್ಲಿಯಲ್ಲಿ “ಜನಂ ಗೋಸಾ-ಬಿಜೆಪಿ ಭರೋಸಾ” ಕಾರ್ಯಕ್ರಮದ ಅಂಗವಾಗಿ ಪಕ್ಷದ ಬೀದಿ ಮೂಲೆ ಸಭೆಯನ್ನುದ್ದೇಶಿಸಿ ಮಾತನಾಡಿದ ಬಂಡಿ ಸಂಜಯ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಿಜಾಮ್ ಆಡಳಿತದ ಗುಲಾಮಗಿರಿಯ ಸಂಕೇತಗಳಾದ ಎಲ್ಲಾ ರೀತಿಯ ರಚನೆಗಳನ್ನು ಅಳಿಸಿಹಾಕುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಭಾರತದಿಂದ ಹೊರನಡೆದ “ಅಲಿಬಾಬಾ ಸಂಸ್ಥೆ”?…ಎಲ್ಲಾ ಷೇರುಗಳು ಪೇಟಿಎಂಗೆ ಮಾರಾಟ
“ನಾವು ಅಧಿಕಾರಕ್ಕೆ ಬಂದರೆ, ಹೊಸದಾಗಿ ನಿರ್ಮಿಸಲಾದ ಸೆಕ್ರೆಟರಿಯೇಟ್ ನ ಗುಮ್ಮಟಗಳು ಸೇರಿದಂತೆ ತೆಲಂಗಾಣದಲ್ಲಿ ನಿಜಾಮರ ಸಾಂಸ್ಕೃತಿಕ ಚಿಹ್ನೆಗಳನ್ನು ನಾಶಪಡಿಸುತ್ತೇವೆ. ನಾವು ಭಾರತ ಮತ್ತು ತೆಲಂಗಾಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೂಕ್ತ ಬದಲಾವಣೆಗಳನ್ನು ಮಾಡುತ್ತೇವೆ” ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ಅಧಿಕೃತ ಬಂಗಲೆಯಾದ ಪ್ರಗತಿ ಭವನವನ್ನು ಪ್ರಜಾ ದರ್ಬಾರ್ ಆಗಿ ಬದಲಾಯಿಸಲಾಗುವುದು ಎಂದು ಬಿಜೆಪಿ ನಾಯಕ ಬಂಡಿ ಸಂಜಯ್ ಘೋಷಿಸಿದರು.
ರಸ್ತೆ ವಿಸ್ತರಣೆಗೆ ಅಡ್ಡಿ ಉಂಟು ಮಾಡುವ ಪ್ರಾರ್ಥನಾ ಮಂದಿರಗಳನ್ನು ಸರ್ಕಾರ ಕೆಡವಲಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಕೆಸಿಆರ್ ಗೆ ಸಾಧ್ಯವಾದರೆ ಹಳೆಪೇಟೆಯ ರಸ್ತೆ ಮಧ್ಯೆ ನಿರ್ಮಿಸಿರುವ ಮಸೀದಿಗಳನ್ನು ಕೆಡವಲಿ ಎಂದು ಸವಾಲು ಹಾಕಿದರು.