Advertisement

Chikkaballapur: ಮೊಯ್ಲಿ ಸ್ಪರ್ಧಿಸ್ತಾರಾ? ಬಚ್ಚೇಗೌಡ ಜಾಗಕ್ಕೆ ಕಮಲ-ದಳ ಅಭ್ಯರ್ಥಿ ಯಾರು?

11:21 PM Jan 04, 2024 | Team Udayavani |

ಚಿಕ್ಕಬಳ್ಳಾಪುರ: ಘಟಾನುಘಟಿಗಳ ಪೈಪೋಟಿಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಈ ಬಾರಿಯೂ ತುರುಸಿನ ಸ್ಪರ್ಧೆಗೆ ಮೈಯೊಡ್ಡಿ ನಿಂತಿದೆ. ಹಾಲಿ ಸಂಸದ ಬಿಜೆಪಿಯ ಬಿ.ಎನ್‌.ಬಚ್ಚೇಗೌಡರು ರಾಜಕೀಯ ನಿವೃತ್ತಿ ಘೋಷಿಸಿರುವುದರಿಂದ ಈ ಕ್ಷೇತ್ರದ ಮೇಲೆ ಹೊಸಬರ ಕಣ್ಣು ನೆಟ್ಟಿದೆ.

Advertisement

ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಹೆಸರಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಕಳೆದ ಸಲ ಬಿಜೆಪಿ ಗೆದ್ದಿತ್ತು. ಈ ತನಕ ನಡೆದಿರುವ 12 ಚುನಾವಣೆಗಳಲ್ಲಿ 10ರಲ್ಲಿ ಕಾಂಗ್ರೆಸ್‌ ಹಾಗೂ ಜನತಾದಳ ಮತ್ತು ಬಿಜೆಪಿ ಒಂದೊಂದು ಬಾರಿ ಗೆದ್ದಿತ್ತು.

ಈ ಬಾರಿ ಕಾಂಗ್ರೆಸ್‌ ಮತ್ತೆ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿರುವುದರಿಂದ ಆ ಪಕ್ಷದಿಂದ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಸಾಲು ಇದೆ. ಈಗ ಮಿತ್ರ ಪಕ್ಷಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಟಿಕೆಟ್‌ ಯಾವ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್‌ ಟಿಕೆಟ್‌ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಅದರಲ್ಲಿ ಪ್ರಮುಖವಾಗಿ ನಿಲ್ಲುವವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ. 2009ರಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸೋತು ಕಂಗೆಟ್ಟಿದ್ದ ಮಾಜಿ ಸಿಎಂ ವೀರಪ್ಪ ಮೊಲಿಗೆ ರಾಜಕೀಯ ಪುನರ್‌ ಜನ್ಮ ಸಿಕ್ಕಿ ರಾಜಕೀಯವಾಗಿ 2ನೇ ಇನ್ಸಿಂಗ್ಸ್‌ ಆರಂಭಿಸಿದವರು. ಬಳಿಕ 2014ರಲ್ಲಿ ಕೂಡ ಮೋದಿ ಅಲೆಯ ವಿರುದ್ಧ ಈಜಿ ಗೆಲುವಿನ ದಡ ಮುಟ್ಟಿದ್ದ ವೀರಪ್ಪ ಮೊಲಿ 2019ರಲ್ಲಿ ಬಿಜೆಪಿ ಬಿ.ಎನ್‌.ಬಚ್ಚೇಗೌಡ ವಿರುದ್ಧ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋತರು.

ಸದ್ಯ 4ನೇ ಬಾರಿಗೆ ವೀರಪ್ಪ ಮೊಲಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಭರದ ತಯಾರಿ ನಡೆಸಿದ್ದಾರೆ.”ನಾನು ಟಿಕೆಟ್‌ ಆಕಾಂಕ್ಷಿ. ಹಾಗೆಂದು ಯಾರಿಗೂ ಲಂಚ ಕೊಡುವುದಿಲ್ಲ’ ಎಂದು ಹೇಳಿ ಪಕ್ಷದೊಳಗೆ ಸಂಚಲನ ಮೂಡಿಸಿರುವ ವೀರಪ್ಪ ಮೊಲಿಗೆ ನೇರಾನೇರ ಸ್ಪರ್ಧೆ ನೀಡುತ್ತಿರುವವರು ಎಐಸಿಸಿ ರಾಷ್ಟ್ರೀಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2023ರಲ್ಲಿ ಸ್ಪರ್ಧಿಸಲು ಪಕ್ಷ ನೀಡಿದ್ದ ಆಫ‌ರನ್ನು ರಕ್ಷಾ ರಾಮಯ್ಯ ಹಾಗೂ ಅವರ ತಂದೆ ಎಂ.ಆರ್‌.ಸೀತಾರಾಮ್‌ ಒಪ್ಪಿರಲಿಲ್ಲ. ಆದರೆ ಈಗ ರಕ್ಷಾ ರಾಮಯ್ಯ ಅವರು ಬಲಿಜ ಸಮುದಾಯದ ಟ್ರಂಪ್‌ ಕಾರ್ಡ್‌ ಮೂಲಕ ಲೋಕಸಭೆ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಪರ ಲಾಬಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಮತ್ತೂಂದೆಡೆ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಸತತ 5 ಬಾರಿ ಗೆದ್ದು 6ನೇ ಬಾರಿ ಗೆಲ್ಲಲಾಗದೇ ಮುಗ್ಗರಿಸಿದ ಮಾಜಿ ಕೃಷಿ ಮಂತ್ರಿ ಎನ್‌.ಎಚ್‌.ಶಿವಶಂಕರ ರೆಡ್ಡಿ, ತನಗೂ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಕ್ಷೇತ್ರದಲ್ಲಿ 3 ಬಣಗಳಾಗಿವೆ. ಟಿಕೆಟ್‌ ಗುದ್ದಾಟದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇಬ್ಬರ ಜಗಳದಲ್ಲಿ ಗೌರಿಬಿದನೂರಿನ ಶಿವಶಂಕರ ರೆಡ್ಡಿಗೆ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ.

Advertisement

ಸುಧಾಕರ್‌ಗೆ ಸಿಗುತ್ತಾ ಟಿಕೆಟ್‌?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಚ್ಚರಿ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ವಿರುದ್ಧ ಸೋತ ಬಿಜೆಪಿಯ ಡಾ| ಕೆ.ಸುಧಾಕರ್‌ಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಒಲವು ಇದೆ. ಆದರೆ ಇನ್ನೊಂದೆಡೆ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ತಮ್ಮ ಪುತ್ರ ಆಲೋಕ್‌ಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇನ್ನೂ ಒಳಗೊಳಗೆ ಈಗಷ್ಟೇ ಬಿಜೆಪಿ ರಾಜ್ಯ ಕಾರ್ಯದರ್ಶಿ ಆಗಿರುವ ಬಾಗೇಪಲ್ಲಿ ಸಿ.ಮುನಿರಾಜು, ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸೀಕಲ್‌ ರಾಮಚಂದ್ರೇ ಗೌಡರ ಹೆಸರು ಕೇಳಿ ಬರುತ್ತಿದೆ. ಮುಖ್ಯವಾಗಿ ಹೊಸಕೋಟೆಯ ಎಂಟಿಬಿ ನಾಗರಾಜ್‌ ತಮ್ಮ ಪುತ್ರನಿಗೂ ಲೋಕಸಭೆಗೆ ಟಿಕೆಟ್‌ ಕೇಳುತ್ತಿದ್ದಾರೆಂಬ ಮಾತಿದೆ.

ಬಿಜೆಪಿ, ಜೆಡಿಎಸ್‌ ಮೈತ್ರಿ ಸೀಟು ಹಂಚಿಕೆ ವಿಚಾರ ಇನ್ನೂ ನಿರ್ಧಾರವಾಗದ ಕಾರಣ ಕ್ಷೇತ್ರ ಯಾರಿಗೆ ದಕ್ಕುತ್ತದೆ ಎನ್ನುವುದು ಸ್ಪಷ್ಟವಿಲ್ಲ. ಒಂದು ಲೆಕ್ಕಾಚಾರದ ಪ್ರಕಾರ ಕೋಲಾರ ಅಥವಾ ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೆ ಜೆಡಿಎಸ್‌ ಕಣ್ಣಿಟ್ಟಿದ್ದು. ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದರೇ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಬಿಜೆಪಿ ಅದನ್ನು ಬಿಟ್ಟುಕೊಡಲಾರದು. ಹೀಗಾಗಿ, ಜೆಡಿಎಸ್‌ಗೆ ಚಿಕ್ಕಬಳ್ಳಾಪುರ ದಕ್ಕುವ ಸಾಧ್ಯತೆ ಇದೆ. ಹಾಗೊಂದು ವೇಳೆ ಆದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಕಣಕ್ಕಿಳಿದರೂ ಅಚ್ಚರಿ ಇಲ್ಲ.

ಒಕ್ಕಲಿಗ, ಬಲಿಜ ಪ್ರಾಬಲ್ಯ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರಾಜಕೀಯ ಹಿನ್ನೋಟ ಗಮನಿಸಿದರೆ ಒಕ್ಕಲಿಗ, ಬಲಿಜ ಸಮುದಾಯ ಪ್ರಾಬಲ್ಯ ಇದ್ದರೂ ಕ್ಷೇತ್ರದಲ್ಲಿ ಹೆಚ್ಚು ವರ್ಷಗಳ ಕಾಲ ಅಧಿಕಾರ ಅನುಭವಿಸಿದ್ದು ಮಾತ್ರ ಅಹಿಂದ ವರ್ಗ, ಅದರಲ್ಲೂ ಕ್ಷೇತ್ರದಲ್ಲಿ ಬೆರಳಣಿಕೆಯಷ್ಟು ಇರುವ ಈಡಿಗರು, ಬ್ರಾಹ್ಮಣರು, ಆರೈವೈಶ್ಯ ದೇವಾಡಿಗ ಸಮುದಾಯ ಮಾತ್ರ ಇಲ್ಲಿವರೆಗೂ ಕ್ಷೇತ್ರದ ಸಂಸದರಾಗಿದ್ದಾರೆ. ಕಳೆದ ಬಾರಿ ಅಷ್ಟೇ ಒಕ್ಕಲಿಗ ಸಮುದಾಯದ ಬಿ.ಎನ್‌.ಬಚ್ಚೇಗೌಡ ಸಂಸದರಾಗಿದ್ದರು. ಸಮುದಾಯದ ಪ್ರಾಬಲ್ಯ ಇದ್ದರೂ ಈ ಹಿಂದೆ ಕ್ಷೇತ್ರದಲ್ಲಿ ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸಿದ್ದ ದಿ.ಸಿಬೈರೇಗೌಡ, ಶಿಡ್ಲಘಟ್ಟದ ಮಾಜಿ ಸಚಿವರಾದ ವಿ.ಮುನಿಯಪ್ಪ, ಯಲುವಹಳ್ಳಿ ರಮೇಶ್‌ಗೆ ಗೆಲುವು ಕೈ ಹಿಡಿದಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next